ದೇಶ

ಟಿಎಂಸಿ ಮುಖಂಡ, ಕೋಲ್ಕತಾ ಮಾಜಿ ಮೇಯರ್ ಸೋವನ್ ಚಟರ್ಜಿ ಬಿಜೆಪಿ ಸೇರ್ಪಡೆ

Lingaraj Badiger

ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜೊತೆಗಿನ ರಾಜಕೀಯ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದ ಬಿಜೆಪಿ, ಬುಧವಾರ ಕೋಲ್ಕತ್ತಾದ ಮಾಜಿ ಮೇಯರ್ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡ ಸೋವನ್ ಚಟರ್ಜಿ ಮತ್ತು ಅವರ ಸಹವರ್ತಿ ಬೈಶಾಖಿ ಬ್ಯಾನರ್ಜಿಯನ್ನು ಪಕ್ಷದ ಸದಸ್ಯರನ್ನಾಗಿ ಸೇರಿಸಿಕೊಂಡಿದೆ.

ಚಟರ್ಜಿ ಮತ್ತು ಬೈಶಾಖಿ ಬ್ಯಾನರ್ಜಿ ಇಬ್ಬರೂ ಪಕ್ಷದ ಪ್ರಧಾನ ಕಚೇರಿಯಲ್ಲಿ ಹಿರಿಯ ಮುಖಂಡರಾದ ಅರುಣ್ ಸಿಂಗ್ ಮತ್ತು ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಇಬ್ಬರನ್ನೂ ಪಕ್ಷಕ್ಕೆ ಸ್ವಾಗತಿಸಿದ ಮುಕುಲ್ ರಾಯ್, ಚಟರ್ಜಿ ಬಿಜೆಪಿಗೆ ಸೇರಿರುವುದು ನಗರದಲ್ಲಿ ತಮ್ಮ ಪಕ್ಷಕ್ಕೆ ಉತ್ತೇಜನವನ್ನು ನೀಡುತ್ತದೆ ಮತ್ತು ಬಿಜೆಪಿ ಕೋಲ್ಕತಾ ಮಹಾನಗರ ಸಭೆ ಚುನಾವಣೆಯಲ್ಲಿ ಗೆಲ್ಲದಿರಬಹುದು. ಆದರೆ 2021ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದರು.

 ಸಂಘಟನೆಗೆ ಹೆಸರುವಾಸಿಯಾಗಿರುವ ಸೋವನ್ ಚಟರ್ಜಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಸಚಿವ ಮತ್ತು ಕೋಲ್ಕತಾ ಮಹಾಪೌರ ಸ್ಥಾನದಿಂದ ಕಳೆದ ವರ್ಷ ನವೆಂಬರ್‌ನಲ್ಲಿ ವಜಾಗೊಳಿಸಿದ್ದರು. ಬೈಶಾಖಿ ಬ್ಯಾನರ್ಜಿ ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಮಿಲ್ಲಿ ಅಲ್ ಅಮೀನ್ ಕಾಲೇಜಿನಲ್ಲಿನ ತಮ್ಮ ಶಿಕ್ಷಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿತ ಸರ್ಕಾರಿ ಶಿಕ್ಷಕರ ಕಿರುಕುಳದಿಂದ ರಾಜೀನಾಮೆ ನೀಡುತ್ತಿರುವುದಾಗಿ ಆರೋಪಿಸಿದ್ದರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ರಲ್ಲಿ 18 ಸ್ಥಾನಗಳನ್ನು ಗೆದ್ದ ಬಿಜೆಪಿ, ರಾಜ್ಯದ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿತ್ತು.

SCROLL FOR NEXT