ದೇಶ

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಹಿಂದೂ ದೇವತೆಗಳ ಚಿತ್ರಗಳು ಸಿಕ್ಕಿದ್ದವು: ರಾಮ್ ಲಲ್ಲಾ ಪರ ವಕೀಲ

Sumana Upadhyaya

ನವದೆಹಲಿ: ಅಯೋಧ್ಯೆಯ ವಿವಾದಿತ ಭೂಮಿಯಲ್ಲಿರುವ ಕಂಬಗಳಲ್ಲಿ ದೇವರ ಹಲವು ಚಿತ್ರಗಳು ದೊರಕಿವೆ ಎಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ  ರಾಮ ಲಲ್ಲಾ ವಿರಾಜಮಾನ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ ಸುಪ್ರೀಂ ಕೋರ್ಟ್ ಗೆ ಶುಕ್ರವಾರ ತಿಳಿಸಿದ್ದಾರೆ.


ಇಂದು ಸುಪ್ರೀಂ ಕೋರ್ಟ್ ನಲ್ಲಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ 7ನೇ ದಿನದ ವಿಚಾರಣೆ ನಡೆದಿದ್ದು ಈ ಸಂದರ್ಭದಲ್ಲಿ ತಮ್ಮ ಹೇಳಿಕೆಗೆ ಪೂರಕವಾದ ಅಂಶಗಳನ್ನು ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು.


ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ ಎದುರು ವಾದ ಮಂಡಿಸಿದ ಅವರು, ವಿವಾದಿತ ಸ್ಥಳವನ್ನು ತಪಾಸಣೆ ಮಾಡಲು ನೇಮಕಗೊಂಡಿದ್ದ ಆಯುಕ್ತರ ವರದಿಯನ್ನು ಓದಿದರು.


1950ನೇ ಇಸವಿ ಏಪ್ರಿಲ್ 16ರಂದು ನ್ಯಾಯಾಲಯ ನೇಮಿಸಿದ್ದ ಆಯುಕ್ತರು ಅಯೋಧ್ಯೆಯ ವಿವಾದಿತ ಭೂಮಿಯನ್ನು ತಪಾಸಣೆ ಮಾಡಿದ್ದರು. ನಂತರ ಅವರು ಸಲ್ಲಿಸಿದ ವರದಿಯಲ್ಲಿ ವಿವಾದಿತ ಸ್ಥಳದಲ್ಲಿದ್ದ ಕಂಬಗಳಲ್ಲಿ ಶಿವ ದೇವರ ಭಾವಚಿತ್ರಗಳಿದ್ದವು ಎಂದು ಸಾರುತ್ತವೆ. ಇಂತಹ ದೇವರ ಮೂರ್ತಿಗಳ ಚಿತ್ರಗಳು ಕಂಬಗಳಲ್ಲಿ ಮಸೀದಿಗಳಲ್ಲಿ ಕಂಡುಬಂದಿರಲಿಲ್ಲ ಕೇವಲ ದೇವಸ್ಥಾನದ ಕಂಬಗಳಲ್ಲಿ ಮಾತ್ರ ಸಿಕ್ಕಿವೆ ಎಂದು ಹೇಳಿ ಇದಕ್ಕೆ ಸಂಬಂಧಪಟ್ಟ ವರದಿಗಳು ಮತ್ತು ಚಿತ್ರಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.


ಅಂದರೆ ಈ ವರದಿಯಿಂದ ಅಯೋಧ್ಯೆಯು ಹಿಂದೂಗಳ ಧಾರ್ಮಿಕ ಪವಿತ್ರ ಸ್ಥಳ ಎಂಬುದು ತಿಳಿದುಬರುತ್ತದೆ ಎಂದು ತಮ್ಮ ವಾದ ಮಂಡಿಸಿದರು.

SCROLL FOR NEXT