ದೇಶ

ಲೈಂಗಿಕ ಕಿರುಕುಳ ಆರೋಪ ಸಾಬೀತು: ಸೇನಾ ಮೇಜರ್ ಜನರಲ್ ವಜಾ

Lingaraj Badiger

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಜನರಲ್ ಅವರನ್ನು ಪಿಂಚಣಿ ಇಲ್ಲದೆಯೇ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಖಚಿತಪಡಿಸಿದ್ದಾರೆ.

ಅಸ್ಸಾಂ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ಜನರಲ್ ಆರ್ ಎಸ್ ಜಸ್ವಾಲ್ ವಿರುದ್ಧ ಕೋರ್ಟ್ ಮಾರ್ಷಲ್ ಮುಕ್ತಾಯಗೊಂಡಿದ್ದು, ದೋಷಿ ಎಂದು ತೀರ್ಪು ಬಂದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವ ಆದೇಶಕ್ಕೆ ಬಿಪಿನ್ ರಾವತ್ ಅವರು ಜುಲೈನಲ್ಲಿಯೇ ಸಹಿ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಸ್ವಾಲ್ ವಿರುದ್ಧದ ಲೈಂಗಿಕ ಕಿರಕುಳ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೇಜರ್ ಜನರಲ್ ಅವರನ್ನು ವಜಾಗೊಳಿಸುವಂತೆ ಕೋರ್ಟ್ ಮಾರ್ಷಲ್ ಕಳೆದ ಡಿಸೆಂಬರ್ ನಲ್ಲಿಯೇ ಶಿಫಾರಸು ಮಾಡಿತ್ತು ಎಂದು ವರದಿ ವಿವರಿಸಿದೆ.

ಸೇನಾ ಮುಖ್ಯಸ್ಥರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಮೇಜರ್ ಜನರಲ್ ಪರ ವಕೀಲ ಆನಂದ್ ಕುಮಾರ್ ಅವರು, ಮೇಜರ್ ಜನರಲ್ ಆರ್ ಎಸ್ ಜಸ್ವಾಲ್ ಅವರನ್ನು ಸೇವೆಯಿಂದ ವಜಾಗೊಳಿಸಿರುವುದು ಕಾನೂನು ಬಾಹಿರ. ಕೋರ್ಟ್ ಮಾರ್ಷೆಲ್ ವಿಚಾರಣಾ ಪ್ರಕ್ರಿಯೆಯ ಪ್ರತಿಯನ್ನು ನಮಗೆ ನೀಡಿಲ್ಲ ಎಂದು ಹೇಳಿದ್ದಾರೆ.

2016ರಲ್ಲಿ ಕ್ಯಾಪ್ಟನ್ ರ್ಯಾಂಕ್ ನ ಮಹಿಳಾ ಅಧಿಕಾರಿಯೊಬ್ಬರು ಮೇಜರ್ ಜನರಲ್ ಆರ್ ಎಸ್ ಜಸ್ವಾಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಆದರೆ ಮೇಜರ್ ಜನರಲ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು.

SCROLL FOR NEXT