ದೇಶ

ಆರ್ಟಿಕಲ್ 370 ರದ್ದು ನಂತರ ಕಾಶ್ಮೀರದಲ್ಲಿ 4,000 ಕ್ಕೂ ಹೆಚ್ಚು ಮಂದಿ ವಶಕ್ಕೆ! 

Srinivas Rao BV

ಶ್ರೀನಗರ: ಆರ್ಟಿಕಲ್ 370 ರದ್ದು ಮಾಡಿ ಎರಡು ವಾರಗಳು ಕಳೆದಿವೆ. ಈ ನಡುವೆ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಹಲವರನ್ನು ವಶಕ್ಕೆ ಪಡೆದಿದ್ದರ ಬಗ್ಗೆ ಬಹುದೊಡ್ದ ಚರ್ಚೆ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಇತ್ತೀಚಿನ ವರದಿಯ ಪ್ರಕಾರ ಎರಡು ವಾರಗಳಲ್ಲಿ 4,000 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 

ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ 4,000 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿಯನ್ನು ಆರೋಪ ಹಾಗೂ ವಿಚಾರಣೆ ಎರಡೂ ಇಲ್ಲದೆಯೇ 2 ವರ್ಷಗಳ ಕಾಲ ಬಂಧನದಲ್ಲಿರಿಸಬಹುದಾಗಿದೆ. 

ಕಾಶ್ಮೀರದ ಸದ್ಯದ ಪರಿಸ್ಥಿತಿಯ ಬಗ್ಗೆ ಸರ್ಕಾರದ ಮೂಲಗಳಿಂದ ಎಎಫ್ ಪಿ ಹೆಕ್ಕಿ ತೆಗೆದಿರುವ ಮಾಹಿತಿಯ ಪ್ರಕಾರ, ಕಾಶ್ಮೀರದ ಕಾರಾಗೃಹಗಳು ತುಂಬಿದ್ದು, ವಶಕ್ಕೆ ಪಡೆದ ವ್ಯಕ್ತಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಇದಕ್ಕಾಗಿ ಸೇನಾ ವಿಮಾನಗಳನ್ನು ಬಳಕೆ ಮಾಡಲಾಗುತ್ತಿದೆ. 

ಆರ್ಟಿಕಲ್ 370 ರದ್ದತಿಯ ನಂತರ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಕ್ಕೆ ತನ್ನ ಸಂಬಂಧಿಯೊಬ್ಬ ಮೃತಪಟ್ಟಿದ್ದಾನೆ ಎಂದು ಮೃತ ವ್ಯಕ್ತಿ ಸಿದೀಕ್ ಖಾನ್ ನ ಸಂಬಂಧಿಯಾಗಿರುವ ಟಿಂಬರ್ ವ್ಯಾಪಾರಿಯಾಗಿರುವ ಮುದ್ದಾಸಿರ್ ಅಹ್ಮದ್ ಆರೋಪಿಸಿದ್ದಾರೆ. ಈ ಸಂಬಂಧ ಕೇಳಿದ ಪ್ರಶ್ನೆಗೆ ಕಾಶ್ಮೀರ ಸರ್ಕಾರ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ. ಮತ್ತೋರ್ವ ಯುವಕ, 370 ರದ್ದಾದ ಹೊಸತರಲ್ಲಿ ಪೊಲೀಸರ ಕೈಗೆ ಸಿಗದಂತೆ ಪರಾರಿಯಾಗುತ್ತಿದ್ದಾಗ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಈ ವರೆಗೂ ವಶಕ್ಕೆ ಪಡೆದಿರುವವರ ಸಂಖ್ಯೆಯನ್ನು ಸರ್ಕಾರ ಈ ವರೆಗೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಸರ್ಕಾರಿ ದಾಖಲೆಗಳ ಪ್ರಕಾರ, ರಾಜಕಾರಣಿಗಳು, ಕಾರ್ಯಕರ್ತರು, ಶಿಕ್ಷಣ ತಜ್ಞರು ಸೇರಿದಂತೆ ಒಟ್ಟಾರೆ 100 ಜನ ಸ್ಥಳಿಯರನ್ನಷ್ಟೇ ವಶಕ್ಕೆ ಪಡೆಯಲಾಗಿದೆ.

SCROLL FOR NEXT