ದೇಶ

ಪ್ರವಾಹ ಆತಂಕ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ, ಹೈ ಅಲರ್ಟ್ ಘೋಷಣೆ

Srinivasamurthy VN

ನವದೆಹಲಿ: ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರೆದಿರುವಂತೆಯೇ ಇತ್ತ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಭೀತಿ ಆರಂಭವಾಗಿದೆ. 

ದೆಹಲಿಯ ಪಕ್ಕದ ಪ್ರದೇಶಗಳಲ್ಲಿ ಯಮುನಾ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. 

ದೆಹಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟವು 207 ಮೀಟರ್ ತಲುಪುವ ಸಾಧ್ಯತೆ ಇದ್ದು, ಜೀವ ಮತ್ತು ಆಸ್ತಿ-ಪಾಸ್ತಿಗೆ ಅಪಾಯವಿದೆ, ಇದು ಅಧಿಕೃತ ಅಪಾಯದ ಗುರುತು 205.33 ಮೀಟರ್ ಗಿಂತ ಹೆಚ್ಚಾಗಿದೆ. ಜನರನ್ನು ಸ್ಥಳಾಂತರಿಸಲು ಮತ್ತು ಅವರನ್ನು ಪರಿಹಾರ ಶಿಬಿರಗಳಿಗೆ ಅಥವಾ ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ (ಪೂರ್ವ) ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ ಗಳಿಗೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.

ಯಮುನಾ ನದಿ ತೀರದ ಬಳಿ ವಾಸಿಸುವ ಅಥವಾ ಕೆಲಸ ಮಾಡುವ ಜನರಿಗೆ ಅಲರ್ಟ್ ಆಗಿ ಇರುವಂತೆ ತಿಳಿಸಲಾಗಿದೆ. ಏಕೆಂದರೆ ಭಾರೀ ಮಳೆ ಮತ್ತು ಹಟ್ನಿ ಕುಂಡ್ ಬ್ಯಾರೇಜ್ ನಿಂದ ನೀರು ಬಿಡುಗಡೆಯಾಗುವುದರಿಂದ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಟ್ನಿ ಕುಂಡ್ ಬ್ಯಾರೇಜ್‌ ನಿಂದ ಭಾನುವಾರ ಮಧ್ಯಾಹ್ನ 3 ಗಂಟೆಯವರೆಗೆ ಸುಮಾರು 7,60,466 ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಇದು ಯಮುನಾ ನದಿ ಜಲಾನಯನ ಪ್ರದೇಶದಲ್ಲಿ ನೀರಿನ ಹೆಚ್ಚಳಕ್ಕೆ ಕಾರಣವಾಗಿದೆ. 

ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ದೆಹಲಿಯ ಕುಡಿಯುವ ನೀರಿನ ಮುಖ್ಯ ಮೂಲವಾದ ಬ್ಯಾರೇಜ್‌ ನಿಂದ ಬಿಡುಗಡೆಯಾದ ನೀರು ಸಾಮಾನ್ಯವಾಗಿ ದೆಹಲಿಯನ್ನು ತಲುಪಲು ಸುಮಾರು 72 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

SCROLL FOR NEXT