ದೇಶ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆ

Lingaraj Badiger

ಜೈಪುರ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸೋಮವಾರ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 

86 ವರ್ಷದ ಡಾ.ಸಿಂಗ್‌ ಅವರು ಇತರೆ ಯಾವುದೇ ಅಭ್ಯರ್ಥಿ ಸ್ಪರ್ಧಿಸದ ಕಾರಣ  ಅವಿರೋಧವಾಗಿ ಆಯ್ಕೆಯಾದರು.

ರಾಜಸ್ಥಾನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಪಕ್ಷದ ಹಿರಿಯ ಮುಖಂಡ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆಯಲ್ಲಿ ಕಳೆದ ಜೂನ್‌ನಲ್ಲಿ ಈ ಸ್ಥಾನ ತೆರವಾಗಿತ್ತು. 

ಡಾ ಸಿಂಗ್ ಅವರು ಕಳೆದ ವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ವಿಶೇಷವೆಂದರೆ, ಹಿರಿಯ ಕಾಂಗ್ರೆಸ್ ನಾಯಕರಾದ ಡಾ.ಸಿಂಗ್‌ ವಿರುದ್ಧ ಬಿಜೆಪಿ ತನ್ನ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

ಅರ್ಥಶಾಸ್ತ್ರಜ್ಞರೂ ಆದ ಡಾ. ಸಿಂಗ್ ಅವರು ಸತತ ಐದು ಬಾರಿ( 1991 ರಿಂದ 2019 ರವರೆಗೆ) ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದರು.

ಡಾ. ಸಿಂಗ್ ಅವರ ಆಯ್ಕೆಯೊಂದಿಗೆ, ಕಾಂಗ್ರೆಸ್ ರಾಜ್ಯಸಭೆಯಲ್ಲಿ ರಾಜಸ್ಥಾನದಿಂದ ತನ್ನ ಸದಸ್ಯರ ಸಂಖ್ಯೆಯನ್ನು ಹತ್ತಕ್ಕೆ ಹೆಚ್ಚಿಸಿಕೊಂಡಿದೆ. ರಾಜ್ಯಸಭೆಯಲ್ಲಿ 245 ಸದಸ್ಯರಿದ್ದು, ಈ ಪೈಕಿ 233 ಮಂದಿ ಚುನಾಯಿತರಾಗಿದ್ದರೆ, 12 ಮಂದಿ ನಾಮನಿರ್ದೇಶನಗೊಂಡಿದ್ದಾರೆ. ಡಾ ಸಿಂಗ್ ಅವರ ಆಯ್ಕೆಯೊಂದಿಗೆ ಕಾಂಗ್ರೆಸ್ 47 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿ 78 ಸದಸ್ಯರನ್ನು ಹೊಂದಿದೆ.

SCROLL FOR NEXT