ದೇಶ

ಫೆಬ್ರವರಿ 27 ರಂದು ಬುದ್ಗಾಂನಲ್ಲಿ ತನ್ನದೇ  ಹೆಲಿಕಾಪ್ಟರ್ ಹೊಡೆದುರುಳಿಸಿದ ಭಾರತ- ತನಿಖಾ ವರದಿ

Nagaraja AB

ನವದೆಹಲಿ: ಬಾಲಾಕೋಟ್ ಎರ್ ಸ್ಟ್ರೈಕ್ ಮಾರನೇ ದಿನ ಫೆಬ್ರವರಿ 27 ರಂದು  ಭಾರತ ಮತ್ತು ಪಾಕಿಸ್ತಾನ ವಾಯುಪಡೆಗಳ ಬಾಹ್ಯಾಕಾಶ ಕಾದಾಟದಲ್ಲಿ ಭಾರತದ ಕ್ಷಿಪಣಿಯಿಂದ ಮಿಗ್ -17 ವಾಯುಪಡೆ ಹೆಲಿಕಾಪ್ಟರ್ ಬುದ್ಗಾಂನಲ್ಲಿ  ಪತನಗೊಂಡಿರುವ ಸಂಗತಿ ತನಿಖಾ ವರದಿಯಿಂದ ತಿಳಿದುಬಂದಿದೆ.  ನಾಲ್ಕು ಅಧಿಕಾರಿಗಳು  ತಪಿತಸ್ಥರೆಂಬುದು ಉನ್ನತ ಮಟ್ಟದ ತನಿಖೆಯಿಂದ ಬೆಳಕಿಗೆ ಬಂದಿದೆ. 

ಈ ದುರ್ಘಟನೆಯಲ್ಲಿ ಆರು ಸೇನಾ ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಮೃತಪಟ್ಟಿದ್ದರು.  ಘಟನೆ ಸಂಬಂಧ ಗ್ರೂಪ್ ಕ್ಯಾಪ್ಟನ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದ್ದು, ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸೇನಾ ಮೂಲಗಳಿಂದ ತಿಳಿದುಬಂದಿದೆ

ಈ ತನಿಖೆ ಸಂಬಂಧ ಭಾರತೀಯ ವಾಯುಪಡೆಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಏರ್ ಕಮಾಂಡರ್ ಶ್ರೇಣಿಯ ಅಧಿಕಾರಿಗಳಿಂದ ಈ ಘಟನೆಯ ತನಿಖೆಗೆ ಭಾರತೀಯ ವಾಯುಪಡೆ ಕೇಂದ್ರ ಕಚೇರಿಯಿಂದ ಆದೇಶಿಸಲಾಗಿತ್ತು. 

ಹೆಲಿಕಾಪ್ಟರ್ ನಲ್ಲಿ ಸ್ನೇಹಿತರು ಅಥವಾ ಶತ್ರುಗಳನ್ನು ಪತ್ತೆ ಹಚ್ಚುವ ವ್ಯವಸ್ಥೆ  ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಭೂಮಿಯ ಮೇಲಿನ ಸಿಬ್ಬಂದಿ ಹಾಗೂ  ಹೆಲಿಕಾಪ್ಟರ್ ಸಿಬ್ಬಂದಿ ನಡುವೆ ಸಂವಹನ ಹಾಗೂ ಸಮನ್ವಯತೆಯ ಕೊರತೆ ಉಂಟಾಗಿ ಈ ಅವಘಡ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
 
ಸೇನಾ ಕಾನೂನಿನ ಪ್ರಕಾರ ತಪಿತಸ್ಥರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗಿದೆ. ಭಾರತೀಯ ವಾಯುಪಡೆಯ ಮುಖ್ಯಸ್ಥರು ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. 

SCROLL FOR NEXT