ದೇಶ

ಶ್ರೀಲಂಕಾದಿಂದ ನುಸುಳಿದ 6 ಉಗ್ರರು; ತಮಿಳುನಾಡಿನಾದ್ಯಂತ ವ್ಯಾಪಕ ಶೋಧ!

Srinivasamurthy VN

ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ, ರಾಜಧಾನಿ ಚೆನ್ನೈ, ಕೊಯಮತ್ತೂರಿನಲ್ಲಿ ವ್ಯಾಪಕ ಶೋಧ

ಚೆನ್ನೈ: ದ್ವೀಪರಾಷ್ಟ್ರ ಶ್ರೀಲಂಕಾದಿಂದ ಸುಮಾರು 6 ಮಂದಿ ಉಗ್ರರು ತಮಿಳುನಾಡಿಗೆ ನುಸುಳಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ತಮಿಳುನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಆರು ಮಂದಿ ಉಗ್ರರು ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ನುಸುಳಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ತಮಿಳುನಾಡಿನ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೇಂದ್ರ ಗುಪ್ತಚರ ಇಲಾಖೆ ಉಗ್ರರ ನುಸುಳಿವಿಕೆ ಕುರಿತು ಮಾಹಿತಿ ನೀಡಿದೆ. ಹೀಗಾಗಿ ತಮಿಳುನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಸಾರ್ವಜನಿಕರು ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳನ್ನು ಕಂಡಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಬಂದರು ನಗರಗಳಾದ ರಾಜಧಾನಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಹೊಟೆಲ್, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಥಿಯೇಟರ್ ಗಳು, ಶಾಪಿಂಗ್ ಮಾಲ್ ಗಳು, ಪಾರ್ಥನಾ ಮಂದಿರಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಅಂತೆಯೇ ಚೆನ್ನೈ ಮತ್ತು ಕೊಯಮತ್ತೂರು ಸಂಪರ್ಕಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಪ್ರತೀ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ಭೀಕರ ಉಗ್ರ ದಾಳಿಯಾಗಿತ್ತು. ಶ್ರೀಲಂಕಾದ ಖ್ಯಾತ ಚರ್ಚ್ ಗಳ ಮೇಲೆ ಐಸಿಸ್ ಉಗ್ರರು ಕ್ಯಾಥೋಲಿಕ್ ಚರ್ಚ್ ಗಳ ಮೇಲೆ ಆತ್ಮಾಹುತಿ ದಾಳಿ ಮಾಡಿ ನೂರಾರು ಅಮಾಯಕರನ್ನು ಕೊಂದು ಹಾಕಿದ್ದರು. ಇದರ ಬೆನ್ನಲ್ಲೇ ಶ್ರೀಲಂಕಾ ಸರ್ಕಾರ ಅಲ್ಲಿ ಸೇನಾ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಹಲವು ಉಗ್ರರು ಪರಾರಿಯಾಗಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ತಮಿಳುನಾಡಿನಲ್ಲೂ ಎನ್ ಐಎ ಅಧಿಕಾರಿಗಳು ದಾಳಿ ಮಾಡಿ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದರು. 
 

SCROLL FOR NEXT