ದೇಶ

ವಿದ್ವಂಸಕ ಕೃತ್ಯ ನಡೆಸಿದ್ದ ಬಾಂಗ್ಲಾ ಭಯೋತ್ಪಾದಕ ಸಂಘಟನೆ ಜೆಎಂಬಿ ಮುಖ್ಯಸ್ಥ ಇಜಾಜ್‌ ಬಂಧನ

Vishwanath S

ಕೋಲ್ಕತಾ: ಖಾಗ್ರಘಡ್‌ ಸ್ಫೋಟ ಮತ್ತು ಬೋಧ್ ಗಯಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಜೆಎಂಬಿ ಭಾರತೀಯ ವಿಭಾಗದ ಮುಖ್ಯಸ್ಥ ಎಂ.ಡಿ.ಇಜಾಜ್‌ನನ್ನು ಕೋಲ್ಕತಾ ಮತ್ತು ಬಿಹಾರ ಪೊಲೀಸ್‌ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗಯಾದಲ್ಲಿ ಬಂಧಿಸಿದೆ.

ಕೆಮಿಕಲ್‌ ಎಂಜಿನಿಯರ್ ಮತ್ತು ಸ್ಫೋಟಕಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದ ಎಂ.ಡಿ.ಇಜಾಜ್, ಸಂಘಟನೆ ಮಾಜಿ ಮುಖ್ಯಸ್ಥ ಕೌಸರ್ ಬಂಧನಕ್ಕೊಳಗಾದ ನಂತರ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ ಭಾರತೀಯ ಸಂಘಟನೆ ಮುಖ್ಯಸ್ಥನಾಗಿದ್ದ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದೇಶದ ಕೆಲವು ಭಾಗಗಳಲ್ಲಿ ಹಬ್ಬುತ್ತಿರುವ ಬಾಂಗ್ಲಾದೇಶಿ ಭಯೋತ್ಪಾದಕ ಗುಂಪು ಜೆಎಂಬಿ ವಿರುದ್ಧ ಇದೊಂದು ಪ್ರಮುಖ ಕಾರ್ಯಾಚರಣೆಯಾಗಿದೆ.

ಖಾಗ್ರಾಘಡ್‌ ಸ್ಫೋಟದ ಮಾಸ್ಟರ್ ಮೈಂಡ್ ಜಮಾತ್-ಉಲ್-ಮುಜಾಹಿದ್ದೀನ್ (ಬಾಂಗ್ಲಾದೇಶ) ಕಾರ್ಯಕರ್ತ ಕೌಸರ್ ಅಲಿಯಾಸ್ ಬೊಮರು ಮಿಜಾನ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2018 ರ ಆಗಸ್ಟ್‌ನಲ್ಲಿ ಬೆಂಗಳೂರಿನಿಂದ ಬಂಧಿಸಿತ್ತು ಮತ್ತು ಅಂದಿನಿಂದ ಈತನನ್ನು ಎನ್‌ಐಎ ವಶಕ್ಕೆ ನೀಡಲಾಗಿತ್ತು.

ಎಂ.ಡಿ.ಇಜಾಜ್ ಅವರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಮತ್ತು ಮುಂದಿನ 48 ಗಂಟೆಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೋಲಿಸ್‌ ಮೂಲಗಳು ತಿಳಿಸಿವೆ. 

ಬಿರ್ಭುಮ್ ಮೂಲದ ಭಯೋತ್ಪಾದಕ ಇಜಾಜ್‌, ಕೌಸರ್ ನೇತೃತ್ವದಲ್ಲಿ ಬುರ್ದ್ವಾನ್ ಮತ್ತು ಬೋಧ್ ಗಯಾದಲ್ಲಿ ನಡೆದ ಸ್ಫೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಆತನ ಬಂಧನದ ನಂತರ ಕೌಸರ್ ಉತ್ತರಾಧಿಕಾರಿಯಾಗಿದ್ದ ಎನ್ನಲಾಗಿದೆ.

SCROLL FOR NEXT