ದೇಶ

ಮೋದಿ ಪರ ಹೊಗಳಿಕೆ; ಕಾಂಗ್ರೆಸ್ ನಾಯಕ ಶಶಿ ತರೂರ್ ಗೆ ಸಂಕಷ್ಟ, ತಮ್ಮದೇ ಕಾರ್ಯಕರ್ತರಿಂದ ತೀವ್ರ ವಿರೋಧ

Srinivasamurthy VN

ನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಇದೀಗ ಪೇಚಿಗೆ ಸಿಲುಕಿದ್ದು, ಈ ಸಂಬಂಧ ಸ್ಪಷ್ಟನೆ ನೀಡುವಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಶಶಿ ತರೂರ್ ಗೆ ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ಶಶಿ ತರೂರ್ ಅವರು ಟ್ವೀಟ್ ನಲ್ಲಿ 'ನರೇಂದ್ರ ಮೋದಿ ಏನಾದರೂ ಸರಿಯಾಗಿ ಮಾಡಿದರೆ ಅಥವಾ ಸರಿಯಾದ ಮಾತು ಹೇಳಿದರೆ ಅವರನ್ನು ಮೆಚ್ಚಬೇಕು ಎಂದು ನಾನು ಆರು ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ. ಇದರಿಂದಾಗಿ ಅವರು ಏನಾದರೂ ತಪ್ಪು ಮಾಡಿದಾಗ ಮತ್ತು ನಾವು ಅವರನ್ನು ಟೀಕಿಸಿದಾಗ ಅವರಿಗೆ ವಿಶ್ವಾಸಾರ್ಹತೆ ಇರುತ್ತದೆ. ಈ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ವಿರೋಧ ಪಕ್ಷದ ಇತರ ಜನರನ್ನು ನಾನು ಸ್ವಾಗತಿಸುತ್ತೇನೆ, ಅದಕ್ಕಾಗಿ ಆ ಸಮಯದಲ್ಲಿ ನನ್ನನ್ನು ಟೀಕಿಸಲಾಯಿತು ಎಂದು ಬರೆದಿದ್ದರು.

ಈ ವಿಚಾರ ಕೇರಳ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಗೊಂದಲಕ್ಕೆ ಕಾರಣವಾಗಿದ್ದು, ಈ ಸಂಬಂಧ ಶಶಿ ತರೂರ್ ಗೆ ನೋಟಿಸ್ ನೀಡುವಂತೆ ಪಕ್ಷದ ಇತರೆ ಸದಸ್ಯರು ಆಗ್ರಹಿಸಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಾಪಲ್ಲಿ ರಾಮಚಂದ್ರನ್ ಅವರು, 'ಪಿಎಂ ಮೋದಿಯವರನ್ನು ಶ್ಲಾಘಿಸಿರುವ ವಿಷಯದ ಬಗ್ಗೆ ಶಶಿ ತರೂರ್ ಅವರಿಂದ ಸ್ಪಷ್ಟನೆ ಪಡೆಯುತ್ತೇವೆ. ಶಶಿ ತರೂರ್ ಸ್ಪಷ್ಟೀಕರಣದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಇನ್ನು ಮೋದಿ ಶ್ಲಾಘನೆ ವಿಚಾರ ಕೇರಳದಲ್ಲಿ ಬಾರಿ ಚರ್ಚೆಗೀಡಾಗಿರುವಂತೆ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಒಂದು ವೇಳೆ ಪಕ್ಷ ನನಗೆ ನೋಟಿಸ್ ನೀಡಿದರೆ ಖಂಡಿತವಾಗಿಯೂ ಉತ್ತರಿಸುತ್ತೇನೆ. ಪ್ರಸ್ತುತ ನಾನು ರಾಹುಲ್ ಗಾಂಧಿ ಅವರ ಸ್ವಾಗತ ಕೋರಲು ಸಿದ್ಧನಾಗುತ್ತಿದ್ದು, ರಾಹುಲ್ ಗಾಂಧಿ ವಯನಾಡಿಗೆ ನಾಲ್ಕು ದಿನಗಳ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಸಂಬಂಧ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಬೇಕಿದೆ ಎಂದು ಶಶಿ ತರೂರ್ ಹೇಳಿದರು.

SCROLL FOR NEXT