ದೇಶ

ಬೆಂಗಳೂರಿನಲ್ಲಿ ಸ್ಫೋಟಕ ತಯಾರಿಕೆ ಆರೋಪಿ ನಜೀರ್ ಶೇಖ್ ಎನ್‌ಐಎಯಿಂದ ಬಂಧನ

Srinivasamurthy VN

ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಗರ್ತಲಾದಲ್ಲಿ ಬಾಂಗ್ಲಾದೇಶದ ನಿಷೇಧಿತ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ (ಜೆಎಂಬಿ)ನ ಪ್ರಮುಖ ಕಾರ್ಯಕರ್ತ ನಜೀರ್ ಶೇಖ್ ಅಲಿಯಾಸ್ ಪಾಟ್ಲಾ ಅನಸ್‌ನನ್ನು ಬಂಧಿಸಿ ಬುಧವಾರ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
  
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಿವಾಸಿ ನಜೀರ್ ಶೇಖ್‌ನನ್ನು ಮಂಗಳವಾರ ಬಂಧಿಸಿ ಅಗರ್ತಲಾ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಎದುರು ಹಾಜರುಪಡಿಸಿ, ಆತನನ್ನು ವಾರಂಟ್‌ ಪಡೆದು ಬೆಂಗಳೂರಿಗೆ ಕರೆತರಲಾಯಿತು.

ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಚಿಕ್ಕಬಾಣಾವರದಲ್ಲಿ ನಿಷೇಧಿತ ಜೆಎಂಬಿ ಸದಸ್ಯರು ಬಾಡಿಗೆ ಮನೆ ಪಡೆದು ಕೈ ಗ್ರೆನೇಡ್ ಮತ್ತು ಐಇಡಿಗಳನ್ನು ತಯಾರಿಸುತ್ತಿದ್ದರು. ಈ ಮನೆ ಮೇಲೆ ಜುಲೈ 7, 2019 ರಂದು ದಾಳಿ ನಡೆಸಿದ ಪೋಲಿಸರು ಐದು ಸುಧಾರಿತ ಕೈ ಗ್ರೆನೇಡ್‌ಗಳು, ಮೂರು ಫ್ಯಾಬ್ರಿಕೇಟೆಡ್ ಗ್ರೆನೇಡ್ ಕ್ಯಾಪ್‌ಗಳು, ಐಇಡಿಗಳ ಮೂರು ಸರ್ಕ್ಯೂಟ್‌ಗಳು, ಒಂದು ಟೈಮರ್ ಸಾಧನ, ಜೀವಂತ ಗುಂಡುಗಳೊಂದಿಗಿನ 9 ಎಂಎಂ ಪಿಸ್ತೂಲ್, ಒಂದು ಏರ್ ಗನ್, ಶಂಕಿತ ಸ್ಫೋಟಕ ಪುಡಿಗಳು ಮತ್ತು ಹಲವಾರು ಇತರ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. 

ನಜೀರ್, ಜೆಎಂಬಿ ಭಾರತ ಘಟಕದ ಸಕ್ರಿಯ ಸದಸ್ಯ ಎಂದು ತನಿಖೆಯಿಂದ ತಿಳಿದುಬಂದಿದೆ. ಈತ ಜೆಎಂಬಿ ಸದಸ್ಯರಾದ ಜಹೀದುಲ್ ಇಸ್ಲಾಂ, ನಜ್ರುಲ್ ಇಸ್ಲಾಂ, ಆಸಿಫ್ ಇಕ್ಬಾಲ್, ಆರಿಫ್ ಮತ್ತು ಇತರರೊಂದಿಗೆ ಬೆಂಗಳೂರಿನಲ್ಲಿ ತಂಗಿದ್ದ ಮತ್ತು ಸಹಚರರೊಂದಿಗೆ ಬೆಂಗಳೂರಿನಲ್ಲಿ ದರೋಡೆ ಮೂಲಕ ಹಣವನ್ನು ಸಂಗ್ರಹಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

SCROLL FOR NEXT