ದೇಶ

ಅರೆ ಕಾರ್ಯಕರ್ತರ ವಿರುದ್ಧ ಪ್ರಕರಣ ಹಿಂಪಡೆಯಿರಿ: ಅಧಿಕಾರಕ್ಕೆ ಬಂದ 2ನೇ ದಿನದಲ್ಲಿ ಠಾಕ್ರೆ ಆದೇಶ

Manjula VN

ಮುಂಬೈ: ವಾಣಿಜ್ಯ ನಗರಿ ಮುಂಬೈನ ಅರೆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಾಗಿ ಸುಮಾರು 2,500ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಆದೇಶದ ವಿರುದ್ಧ ಹೋರಾಡಿದ್ದ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವಂತೆ ಮಹಾರಾಷ್ಟ್ರ ರಾಜ್ಯ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಸೋಮವಾರ ಆದೇಶ ನೀಡಿದ್ದಾರೆ.

ಅಧಿಕಾರಕ್ಕೆ ಬಂದ 2ನೇ ದಿನದಲ್ಲಿ ಉದ್ಧವ್ ಠಾಕ್ರೆಯವರು ಅರೆ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ಹಿಂಪಡೆಯುವಂತೆ ಆದೇಶಿಸಿದ್ದಾರೆ. ಅಲ್ಲದೆ, ಶೀಘ್ರದಲ್ಲಿಯೇ ರಾಜ್ಯದ ಆರ್ಥಿಕತೆಯ ವಿಚಾರ ಸಂಬಂಧ ಶೀಘ್ರದಲ್ಲಿಯೇ ಶ್ವೇತಪತ್ರ ಹೊರಡಿಸುವುದಾಗಿಯೂ ಘೋಷಣೆ ಮಾಡಿದ್ದಾರೆ. 

ಅಭಿವೃದ್ಧಿ ಬಗ್ಗೆ ಮಾತನಾಡಬೇಕಾದರೆ ಎಲ್ಲರನ್ನೂ ಜೊತೆಗೆ ಸೇರಿಸಿಕೊಳ್ಳಬೇಕು. ಅರೆ ಕಾಲೋನಿಯಲ್ಲಿ ಮರಗಳನ್ನು ಕಡಿಯಲು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸರ್ಕಾರ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಜನರು ಆರೋಗ್ಯ ಹಾಗೂ ಸಂತೋಷದಿಂದ ಇರಬೇಕೆಂದು ನಾವು ಬಯಸುತ್ತೇವೆ. ಅರೆ ಕೇವಲ ಮರಗಳಿಗೆ ಸಂಬಂಧಿಸಿದ್ದಲ್ಲ. ಅದು ಪರಿಸರ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ. ಮೆಟ್ರೋ ಕಾಮಗಾರಿಯೊಂದೇ ಸ್ಥಗಿತಗೊಂಡಿದೆ. ಪರಿಸರ ಕಾರ್ಯಕರ್ತರ ವಿರುದ್ಧ ಪ್ರಕರಣ ಹಿಂಪಡೆಯುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಠಾಕ್ರೆ ತಿಳಿಸಿದ್ದಾರೆ. 
 
ಮುಂಬೈ ಮೆಟ್ರೋ ಡಿಪೋ ನಗರದಲ್ಲಿರುವ 2,500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಆದರೆ, ಇದನ್ನು ವಿರೋಧಿಸಿ ಪರಿಸರವಾದಿಗಳು ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಅಧಿಕಾರಿಗಳು ರಾತ್ರೋರಾತ್ರಿ ಮರ ಕಡಿಯುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ಇದನ್ನು ವಿರೋಧಿಸಿ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದರು.  

SCROLL FOR NEXT