ದೇಶ

ಪೌರತ್ವ ತಿದ್ದುಪಡಿ ಮಸೂದೆಗೂ ಕೇಂದ್ರ ಸಂಪುಟ ಅಸ್ತು, ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆ

Lingaraj Badiger

ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕ ಪೌರತ್ವ ಹಕ್ಕು ನೀಡುವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕಳೆದ ಲೋಕಸಭೆಯಲ್ಲಿ ಈ ವಿವಾದಿತ ಮಸೂದೆಯನ್ನು ಮಂಡಿಸಲಾಗಿದ್ದು, ಅದಕ್ಕೆ ಅಂಗೀಕಾರ ದೊರಕಿರಲಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ವಾರ ಮತ್ತೆ ಸಂಸತ್ ನಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ ಎಂದೂ ವರದಿಯಾಗಿದೆ.

ಮಂಗಳವಾರವೇ ಈ ಕುರಿತು ಬಿಜೆಪಿ ಸಂಸದರಿಗೆ ಸುಳಿವು ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಮಸೂದೆಗೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ವೇಳೆ ಎಲ್ಲ ಸಂಸದರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ ಎಂದು ರಕ್ಷಣಾ ಸಚಿವರು ಸೂಚ್ಯವಾಗಿ ಹೇಳಿದ್ದಾರೆ ಎಂದೂ ಉನ್ನತ ಮೂಲಗಳು ತಿಳಿಸಿವೆ.

2016ರಲ್ಲಿ ಮೊದಲಿಗೆ ಸಂಸತ್ತಿನಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು. ಅಸ್ಸಾಂ ಹಾಗೂ ಈಶಾನ್ಯ ಭಾಗದ ರಾಜ್ಯಗಳ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

1985ರ ಅಸ್ಸಾಂ ಒಪ್ಪಂದದ ಅನುಸಾರ, 1971ರ ಮಾರ್ಚ್ 24ರ ಬಳಿಕ ವಲಸೆ ಬಂದ ಯಾವುದೇ ಧರ್ಮದವರನ್ನು ಸಹಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ತಿದ್ದುಪಡಿ ಮಾಡಲಾಗಿರುವ ಮಸೂದೆ ಜಾರಿಗೆ ಬಂದರೆ, ಅಸ್ಸಾಂ ಒಪ್ಪಂದ ಅರ್ಥ ಕಳೆದುಕೊಳ್ಳಲಿದೆ ಎನ್ನುವುದು ಇವರ ವಾದ. ಮೇಘಾಲಯ ಹಾಗೂ ಮಿಜೋರಾಂ ಸರ್ಕಾರಗಳು ಸಹ ಈ ತಿದ್ದುಪಡಿ ಮಸೂದೆ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ.

SCROLL FOR NEXT