ದೇಶ

ನಾನು ಈರುಳ್ಳಿ, ಬೆಳ್ಳುಳ್ಳಿ ತಿನ್ನೋದಿಲ್ಲ, ನಮ್ಮ ಮನೆಗೆ ತರೋದಿಲ್ಲ, ಚಿಂತೆಯಿಲ್ಲ: ಸಚಿವೆ ನಿರ್ಮಲಾ ಸೀತಾರಾಮನ್ 

Sumana Upadhyaya

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ತಗ್ಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಅಡುಗೆ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ತೀವ್ರ ಹಣದುಬ್ಬರದಿಂದ ದೇಶದಲ್ಲಿ ಹೂಡಿಕೆ ಮಾಡಿದವರಿಗೆ ಭೀತಿ ಎದುರಾಗಿದೆ ಎಂಬ ಪ್ರತಿಪಕ್ಷದವರ ಟೀಕೆಗಳನ್ನು ನಿರಾಕರಿಸಿದ ಸಚಿವೆ, ವಿದೇಶಿ ನೇರ ಹೂಡಿಕೆ ಈ ವರ್ಷದ ಮೊದಲಾರ್ಧದಲ್ಲಿ 17 ಬಿಲಿಯನ್ ಡಾಲರ್ ನಿಂದ 209 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಪ್ರತಿಪಾದಿಸಿದರು.


ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೊದಲ ಭಾಗದ ಮೇಲಿನ ಚರ್ಚೆಗೆ ನಿನ್ನೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, ಈರುಳ್ಳಿ ಬೆಲೆ ಏರಿಕೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿ ರಫ್ತುಗಳ ನಿಷೇಧ, ಷೇರು ಮಿತಿಯನ್ನು ಹೆಚ್ಚಿಸುವುದು, ಕೊರತೆಯ ಪ್ರದೇಶಕ್ಕೆ ಈರುಳ್ಳಿ ಆಮದು ಮತ್ತು ವರ್ಗಾವಣೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.


2014ರಿಂದ ಈರುಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಹೆಚ್ಚುವರಿ ಬೆಳೆಯಾದಾಗ ರಫ್ತಿಗೆ ಬೆಂಬಲವನ್ನು ಸರ್ಕಾರ ನೀಡಿದೆ. ರಫ್ತಿಗೆ ಶೇಕಡಾ 5ರಿಂದ 7ರಷ್ಟು ಸಹಾಯ ಮಾಡಲಾಗಿದೆ.ಈರುಳ್ಳಿಗೆ ಸಂಬಂಧಿಸಿದಂತೆ ಸಾಕಷ್ಟು ರಚನಾತ್ಮಕ ಸಮಸ್ಯೆಗಳಿವೆ.ಸರಿಯಾದ ಸುಧಾರಿತ ಅತ್ಯಾಧುನಿಕ ಸಂಗ್ರಾಹಕ ವ್ಯವಸ್ಥೆ ನಮ್ಮಲ್ಲಿಲ್ಲ, ವೈಜ್ಞಾನಿಕ ವ್ಯವಸ್ಥೆಯಿಲ್ಲ. ಇದರಿಂದಾಗಿ ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಕಷ್ಟವಾಗುತ್ತಿದೆ ಎಂದರು.


ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಕುಟುಂಬಕ್ಕೆ ಸೇರಿದವಳು: ಲೋಕಸಭೆಯಲ್ಲಿ ಹೀಗೆ ಚರ್ಚೆ ನಡೆಯುತ್ತಿರಬೇಕಾದರೆ ಮಾತಿನ ಮಧ್ಯೆ ಸಚಿವೆ, ನಮ್ಮ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದಿಲ್ಲ, ನಾನು ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಕುಟುಂಬಕ್ಕೆ ಸೇರಿದವಳು, ಹೀಗಾಗಿ ಬೆಲೆ ಏರಿಕೆಯ ಚಿಂತೆಯಿಲ್ಲ ಎಂದರು. ಅವರು ಹೀಗೆ ಹೇಳಿರುವ ಸುಮಾರು 20 ಸೆಕೆಂಡುಗಳ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. 

ಇದಕ್ಕೆ ಸಂಸದರೊಬ್ಬರು, ಅತಿಯಾಗಿ ಈರುಳ್ಳಿ ಸೇವಿಸುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದರು. ಅದಕ್ಕೆ ಹಣಕಾಸು ಸಚಿವೆ ಏನೂ ಉತ್ತರ ಕೊಡಲು ಹೋಗಲಿಲ್ಲ. ನಂತರ ಎನ್ ಸಿಪಿ ಸದಸ್ಯೆ ಸುಪ್ರಿಯಾ ಸುಳೆ ಅವರನ್ನುದ್ದೇಶಿಸಿ ಮಾತುಗಳನ್ನು ಮುಂದುವರಿಸಿದರು.

SCROLL FOR NEXT