ದೇಶ

ಒಂದೆಡೆ ರಾಮ ಮಂದಿರ ನಿರ್ಮಾಣ, ಇನ್ನೊಂದೆಡೆ ಸೀತೆಗೆ ಬೆಂಕಿ: ಕಲಾಪದಿಂದ ಹೊರನಡೆದ ಕಾಂಗ್ರೆಸ್ ಸದಸ್ಯರು 

Sumana Upadhyaya

ನವದೆಹಲಿ: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಮೇಲೆ ಆರೋಪಿಗಳು ಬೆಂಕಿ ಹಚ್ಚಿಸಿದ ಘಟನೆಯನ್ನು ವಿರೋಧಿಸಿ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಶುಕ್ರವಾರ ಲೋಕಸಭೆಯಲ್ಲಿ ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು. 


ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ದೇಹ ಶೇಕಡಾ 95ರಷ್ಟು ಭಾಗ ಸುಟ್ಟು ಹೋಗಿದೆ. ದೇಶದಲ್ಲಿ ಏನಾಗುತ್ತಿದೆ? ಒಂದೆಡೆ ರಾಮಮಂದಿರ ನಿರ್ಮಾಣವಾಗುತ್ತಿದೆ. ಇನ್ನೊಂದೆಡೆ ಸೀತಾ ಮಾತೆ ಮೇಲೆ ಬೆಂಕಿ ಹಚ್ಚುತ್ತಿದ್ದಾರೆ. ಅಪರಾಧಿಗಳಿಗೆ ಇಷ್ಟು ಧೈರ್ಯ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.


ಮಹಿಳೆಯರ ಮೇಲಿನ ಅಪರಾಧಗಳಿಗೆ ಪರಿಣಾಮಕಾರಿ ಕಾನೂನನ್ನು ತರುವ ಅವಶ್ಯಕತೆಯಿದ್ದು ಇಂತಹ ಕೇಸುಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ನೇರವಾಗಿ ವಿಚಾರಣೆ ನಡೆಸಬೇಕು ಎಂದು ಶಿವಸೇನಾ ಸದಸ್ಯ ಅರವಿಂದ್ ಸಾವಂತ್ ಹೇಳಿದರು.ಇಂತಹ ಕೇಸುಗಳು ಕೆಳ ನ್ಯಾಯಾಲಯಗಳಿಂದ ವಿಚಾರಣೆ ನಡೆಯುತ್ತಾ ಹೋಗಿ ಅನೇಕ ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸಮಯ ಬಂದಿದೆ. ಸ್ಪೀಕರ್ ಸಮಿತಿಯನ್ನು ರಚಿಸಬೇಕು ಎಂದು ಮನವಿ ಮಾಡಿಕೊಂಡರು.


ಈ ಹಂತದಲ್ಲಿ ಕ್ರೋಧಗೊಂಡ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಗೊಳಿಸಿ ಅದಕ್ಕೆ ಕೋಮುವಾದಿ ಬಣ್ಣ ಹಚ್ಚುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.


ಮಹಿಳೆಯರ ಭದ್ರತೆ ಮತ್ತು ಗೌರವಗಳಿಗೆ ಕೋಮುವಾದಿ ಬಣ್ಣ ಹಚ್ಚಬಾರದು. ಇಲ್ಲಿ ಸದಸ್ಯರೊಬ್ಬರು ತೆಲಂಗಾಣ ಮತ್ತು ಉನ್ನಾವೊ ಪ್ರಕರಣಗಳನ್ನು ತೆಗೆದುಕೊಂಡರು ಆದರೆ ಮಾಲ್ಡಾ ಪ್ರಕರಣವನ್ನು ಬಿಟ್ಟುಬಿಟ್ಟರು. ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ತೆಲಂಗಾಣ ಮತ್ತು ಉನ್ನಾವೊ ಪ್ರಕರಣಗಳು ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿದ್ದು ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು. ಆದರೆ ಇಂತಹ ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದರು.

SCROLL FOR NEXT