ದೇಶ

ಠಾಕ್ರೆ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ, ಸೇನಾಗೆ ಗೃಹ, ಎನ್ ಸಿಪಿಗೆ ಹಣಕಾಸು, ಕಾಂಗ್ರೆಸ್ ಗೆ ಕಂದಾಯ

Lingaraj Badiger

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೊನೆಗೂ ತಮ್ಮ ಸಂಪುಟದ ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಿದ್ದು, ಶಿವಸೇನಾಗೆ ಗೃಹ ಖಾತೆ, ಎನ್ ಸಿಪಿಗೆ ಹಣಕಾಸು ಖಾತೆ ಹಾಗೂ ಕಾಂಗ್ರೆಸ್ ಗೆ ಕಂದಾಯ ಖಾತೆಯನ್ನು ನೀಡಲಾಗಿದೆ.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಕಳೆದ ನವೆಂಬರ್ 28ಕ್ಕೆ ಅಸ್ತಿತ್ವಕ್ಕೆ ಬಂದಿತ್ತು. ಸುಮಾರು 15 ದಿನಗಳ ನಂತರ ಸಿಎಂ ಠಾಕ್ರೆ ಅವರು ಖಾತೆ ಹಂಚಿಕೆ ಮಾಡಿದ್ದು, ಶಿವಸೇನೆಯ ಏಕನಾಥ್ ಶಿಂಧೆ ಅವರಿಗೆ ಗೃಹ ಖಾತೆ, ನಗರಾಭಿವೃದ್ಧಿ, ಪರಿಸರ, ಪ್ರವಾಸೋದ್ಯಮ ಹಾಗೂ ಲೋಕೋಪಯೋಗಿ ಖಾತೆ ನೀಡಲಾಗಿದೆ.

ಶಿವಸೇನೆಯ ಸುಭಾಷ್ ದೇಸಾಯಿ ಅವರಿಗೆ ಕೈಗಾರಿಕೆ, ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ, ಕ್ರೀಡಾ ಮತ್ತು ಯುವಜನ ಖಾತೆ ನೀಡಲಾಗಿದೆ.

ಇನ್ನು ಎನ್ ಸಿಪಿಯ ಜಯಂತ್ ಪಾಟೀಲ್ ಅವರಿಗೆ ಹಣಕಾಸು ಖಾತೆ, ಯೋಜನಾ, ವಸತಿ, ನಾಗರಿಕ ಆಹಾರ ಪೂರೈಕೆ ಮತ್ತು ಕಾರ್ಮಿಕ ಖಾತೆ ನೀಡಲಾಗಿದೆ. ಎನ್ ಸಿಪಿಯ ಮತ್ತೊಬ್ಬ ಸಚಿವ ಛಗನ್ ಭುಜಬಲ್ ಅವರಿಗೆ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಜಲ ಸಂಪನ್ಮೂಲ ಖಾತೆ ನೀಡಲಾಗಿದೆ.

ಕಾಂಗ್ರೆಸ್ ನ ಬಾಳಸಾಹೇಬ್ ತೋರಟ್ ಅವರಿಗೆ ಕಂದಾಯ, ಶಿಕ್ಷಣ, ಮೀನುಗಾರಿಕೆ ಖಾತೆ ಹಾಗೂ ನಿತೀನ್ ರಾವತ್ ಅವರಿಗೆ ಬುಡಕಟ್ಟು ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ.

SCROLL FOR NEXT