ದೇಶ

ಆಂಧ್ರ ವಿಧಾನಸಭೆಯಲ್ಲಿ ದಿಶಾ ಮಸೂದೆ ಅಂಗೀಕಾರ, 21 ದಿನದಲ್ಲೇ ಅತ್ಯಾಚಾರಿಗಳಿಗೆ ಗಲ್ಲು

Lingaraj Badiger

ಅಮರಾವತಿ: ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಮತ್ತಿತರ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ನಂತರ 21 ದಿನಗಳಲ್ಲಿಯೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮಹತ್ವದ ದಿಶಾ(ಆಂಧ್ರಪ್ರದೇಶ ಅಪರಾಧ ಕಾನೂನು( ತಿದ್ದುಪಡಿ) ಮಸೂದೆಯನ್ನು ಶುಕ್ರವಾರ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

ಇಂದು ವಿಧಾನಸಭೆಯಲ್ಲಿ ದಿಶಾ ಮಸೂದೆ ಮಂಡಿಸಿ ಮಾತನಾಡಿದ ಆಂಧ್ರ ಗೃಹ ಸಚಿವೆ ಮೆಕಥೋಟಿ ಸುಚರಿಥಾ ಅವರು, ಈ ಕಾಯ್ದೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ತ್ವರಿತ ತನಿಖೆ, ವಿಚಾರಣೆ ಮತ್ತು ಶಿಕ್ಷೆಯನ್ನು ಖಾತರಿಪಡಿಸಲಿದೆ ಎಂದರು.

ಘಟನೆ ನಡೆದ 14 ದಿನಗಳಲ್ಲೇ ತನಿಖೆ ಪೂರ್ಣಗೊಳ್ಳಲಿದೆ ಮತ್ತು ತಪ್ಪಿತಸ್ಥರಿಗೆ 21 ದಿನಗಳಲ್ಲೇ ಶಿಕ್ಷೆ ನೀಡಲು ಈ ಹೊಸ ಕಾನೂನಿನಲ್ಲಿ ಅವಕಾಶ ಇದೆ ಎಂದು ಅವರು ಹೇಳಿದರು.

ತ್ವರಿತ ವಿಚಾರಣೆಗಾಗಿ ಪ್ರತಿ ಜಿಲ್ಲೆಯಲ್ಲೂ ಸರ್ಕಾರ ಫಾಸ್ಟ್ ಟ್ರಾಕ್ ಕೋರ್ಟ್ ಗಳನ್ನು ಸ್ಥಾಪಿಸಲಿದೆ ಎಂದು ಮೆಕಥೋಟಿ ಸುಚರಿಥಾ ಅವರು ತಿಳಿಸಿದ್ದಾರೆ.

ಮಹಿಳೆಯರ ಮೇಲೆ ಅತ್ಯಾಚಾರ , ಆಸಿಡ್ ದಾಳಿ ಮತ್ತಿತರ ಹೀನ ಕೃತ್ಯಗಳು ನಡೆದ 14 ದಿನಗಳಲ್ಲಿಯೇ ವೇಗವಾಗಿ ವಿಚಾರಣೆ ನಡೆಸಿ, ಘಟನೆ ನಡೆದ 21 ದಿನಗಳಲ್ಲೇ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. 

ಆಂಧ್ರಪ್ರದೇಶ ರಾಜ್ಯದಲ್ಲಿನ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಜಗನ್ ಮೋಹನ್ ನೇತೃತ್ವದ ಸರ್ಕಾರ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. 

ಪೋಕ್ಸೊ ಕಾಯ್ದೆಯಡಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಆಂಧ್ರ ಸಂಪುಟ ಅನುಮೋದನೆ ನೀಡಿದೆ.

SCROLL FOR NEXT