ದೇಶ

ದೇಶಾದ್ಯಂತ 4 ಸಾವಿರ ಆಯುಷ್ ಕೇಂದ್ರ ಆರಂಭ: ಕೇಂದ್ರ ಸಚಿವ ಶ್ರೀಪಾದ್ ನಾಯಕ್

Lingaraj Badiger

ನವದೆಹಲಿ: ಈ ವರ್ಷ ದೇಶಾದ್ಯಂತ 4 ಸಾವಿರ ಆಯುಷ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ತೆರೆಯಲು ಆಯುಷ್ ಸಚಿವಾಲಯ ನಿರ್ಧರಿಸಿದೆ ಎಂದು ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಅವರು ಹೇಳಿದ್ದಾರೆ.

ಡಿಜಿಟಲ್ ಇಂಡಿಯಾ ಅಭಿಯಾನದಡಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಕ್ಲೌಡ್ ಆಧಾರಿತ ಆಯುಷ್ ಗ್ರಿಡ್ ಅನ್ನು ಸಹ ಸಚಿವಾಲಯ ರೂಪಿಸುತ್ತಿದೆ ಎಂದಿದ್ದಾರೆ.

ಆಯುಷ್ ವಲಯದ ಎಲ್ಲ ಹಂತಗಳ – ಸಂಶೋಧನೆ, ಶಿಕ್ಷಣ, ಯೋಜನೆ ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಡಿಜಿಟಲ್ ಪರಿಸರ ಕಲ್ಪಿಸಿಕೊಡಲು ಗ್ರಿಡ್ ರೂಪಿಸಲಾಗಿದೆ.

ಆಯುಷ್ ಚಿಕಿತ್ಸಾ ಪದ್ಧತಿಯನ್ನು ಜಾಗತಿಕವಾಗಿ ಪಸರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೂ ಆಯುಷ್ ಸಚಿವಾಲಯ ಮಾತುಕತೆ ನಡೆಸಿದೆ. ಆಯುರ್ವೇದ ಮತ್ತು ಇತರ ಚಿಕಿತ್ಸಾ ಪದ್ಧತಿಗಳ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ರಾಷ್ಟ್ರರಾಜಧಾನಿಯಲ್ಲಿ ಈ ವಾರ “ಜಾಗತಿಕ ಆರೋಗ್ಯದಲ್ಲಿ ಆಯುರ್ವೇದ ವಿಜ್ಞಾನ” ಎಂಬ ವಿಷಯದ ಕುರಿತು ಸಮ್ಮೇಳನ ನಡೆದಿದೆ ಎಂದರು.

ಭಾರತದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗಿರುವ ನಿಯಮಾವಳಿಗಳು ಮತ್ತು ಮೂಲಸೌಕರ್ಯದ ಬಗ್ಗೆ ಜನರಿಗೆ ಮಾಹಿತಿ ತಲುಪಿಸುವುದೂ ಸಹ ಇದರ ಉದ್ದೇಶವಾಗಿದೆ. ಅಲ್ಲದೇ ಭಾರತದಲ್ಲಿ ಈ ಚಿಕಿತ್ಸಾ ಪದ್ಧತಿಯ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ಬಗೆಗೂ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವಿದೇಶಿ ವೈದ್ಯಕೀಯ ಪದ್ಧತಿಗಳು ಸಹ ಪಾರಂಪರಿಕ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಗುರುತಿಸಿದ್ದು ಅದರ ಸಮಗ್ರ ಚಿಕಿತ್ಸಾ ವಿಧಾನದಿಂದಲೇ ಜಾಗತಿಕ ಮನ್ನಣೆ ಪಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಸುಬ್ರಮಣ್ಯಂ ಜೈಶಂಕರ್ ಹೇಳಿದ್ದಾರೆ.

SCROLL FOR NEXT