ದೇಶ

ರಾಹುಲ್ ಗಾಂಧಿಯನ್ನು ಮತ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಕಾರ್ಯತಂತ್ರ

Nagaraja AB

ನವ ದೆಹಲಿ: ಲೋಕಸಭಾ ಚುನಾವಣೆ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್ ಗಾಂಧಿಯನ್ನು  ಆರು ತಿಂಗಳ ಬಳಿಕ ಮತ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ. 

ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ ಗಡ ಮುಖ್ಯಮಂತ್ರಿ ಭೂಪೇಶ್ ಬಾಗೇಲ್,  ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಸೇರಿದಂತೆ ಹಲವು ಹಿರಿಯ ನಾಯಕರು, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹೋರಾಟ ಮಾಡುವಲ್ಲಿ ರಾಹುಲ್ ಗಾಂಧಿಯೇ ಪಕ್ಷದ ಉಸ್ತುವಾರಿ ವಹಿಸಬೇಕೆಂದು ಕೆಲವು ದಿನಗಳಿಂದ  ಒತ್ತಾಯಿಸುತ್ತಿದ್ದಾರೆ. 

ರಾಹುಲ್ ಗಾಂಧಿಯೇ ಪಕ್ಷದ ನೇತೃತ್ವ ವಹಿಸಬೇಕೆಂಬುದು ಸೋನಿಯಾ ಗಾಂಧಿ ಅವರ ಇಚ್ಚೆಯೂ ಆಗಿದೆ. ಸೂಕ್ತ ಕಾರ್ಯತಂತ್ರದೊಂದಿಗೆ ಮತ್ತೆ ಅವರನೇ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬಂತಹ ಮಾತುಗಳು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಸೋನಿಯಾ ಗಾಂಧಿ ಶಾಶ್ವತವಾಗಿ ಅಧ್ಯಕ್ಷರಾಗಿರಲು ಸಾಧ್ಯವಿಲ್ಲ. ಶೀಘ್ರದಲ್ಲಿಯೇ ಪೂರ್ಣಾವಧಿಯ ಅಧ್ಯಕ್ಷರನ್ನು ನೇಮಿಸಲಾಗುವುದು, ಸೋನಿಯಾ ಅವರ ಆರೋಗ್ಯದ ಸಮಸ್ಯೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಕಮಲ್ ನಾಥ್ ಹೇಳಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಬಳಿಕ ಮುಂದಿನ ವರ್ಷ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುವ ಸಾಧ್ಯತೆಯೂ ಹೆಚ್ಚಾಗಿದೆ. 

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ವಿದೇಶದಲ್ಲಿರುವುದರಿಂದ ಭಾರತ್ ಬಚಾವೋ ರಾಲಿ ಉದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ಮುಂದೂಡಲಾಗಿದೆ ಎಂದು ಪಕ್ಷದ ವರದಿಗಳು ಹೇಳಿವೆ.

SCROLL FOR NEXT