ದೇಶ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆ: ಅಸ್ಸಾಂನಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿಕೆ, ಕರ್ಫ್ಯೂ ಸಡಿಲಿಕೆ 

Sumana Upadhyaya

ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆ-2019 ಜಾರಿ ವಿರೋಧಿಸಿ ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.


ಗುವಾಹಟಿಯಲ್ಲಿ ನಡೆದ ಹಿಂಸಾಕೃತ್ಯದಲ್ಲಿ ಬುಲೆಟ್ ದಾಳಿಗೆ ತುತ್ತಾಗಿದ್ದ ಈಶ್ವರ್ ನಾಯಕ್ ಇಂದು ಅಸುನೀಗಿದ್ದಾರೆ. 25 ವರ್ಷದ ಶಾಪಿಂಗ್ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಈಶ್ವರ್ ನಿಧನರಾಗಿದ್ದಾರೆ. 


ಕಳೆದ ಶುಕ್ರವಾರ ರಾತ್ರಿ 6 ಮಂದಿ ದುಷ್ಕರ್ಮಿಗಳ ತಂಡದಿಂದ ತೈಲ ಟ್ಯಾಂಕರ್ ಮೇಲೆ ಬೆಂಕಿ ಹತ್ತಿ ತೀವ್ರ ಸುಟ್ಟುಹೋಗಿದ್ದ ಮತ್ತೊಬ್ಬ ವ್ಯಕ್ತಿ ಗುವಾಹಟಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ದಿನಗಳ ಹಿಂದೆ ಲಾಲುಂಗ್ ಗೌನ್ ನಲ್ಲಿ ಬುಲೆಟ್ ದಾಳಿಗೆ ಒಳಗಾಗಿದ್ದ ಅಬ್ದುಲ್ ಹಲಿಮ್ ಕೂಡ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಇದಕ್ಕೂ ಹಿಂದೆ ಗುವಾಹಟಿಯಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ ಹತ್ತನೇ ತರಗತಿ ಬಾಲಕ ಪೊಲೀಸ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ಗುವಾಹಟಿ ಮತ್ತು ದಿಬ್ರುಗರ್ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದ್ದು ಇಂದು ಹಲವು ಗಂಟೆಗಳ ಕಾಲ ಸಡಿಲಿಸಲಾಯಿತು. ಅಸ್ಸಾಂ ಪ್ರವಾಸೋದ್ಯಮ ಇಲಾಖೆ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಕರಿಗೆ ಅನುಕೂಲವಾಗಲು ವಿಶೇಷ ರೈಲು ವ್ಯವಸ್ಥೆ ಮಾಡಿದೆ. 


ಇಂದು ಗುವಾಹಟಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ದಿಬ್ರುಗರ್ ಪಶ್ಚಿಮ, ನಹರ್ಕಟಿಯಾ, ತೆಲುಘಾಟ್ ಪ್ರದೇಶಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. 
ಆದರೆ ಭೂತಾನ್ ನ ಪಾರೊ ಸೇರಿದಂತೆ 6 ಕಡೆಗಳಿಗೆ ಕಾನೂನು ಸುವ್ಯವಸ್ಥೆ ಹಿನ್ನಲೆಯಲ್ಲಿ 6 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ ಎಂದು ವಿಮಾನಯಾನ ಪ್ರಾಧಿಕಾರ ತಿಳಿಸಿದೆ.


ಈ ಮಧ್ಯೆ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದ್ದು 2 ಸಾವಿರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆ ವೇಳೆ ಕ್ರಿಮಿನಲ್ ಗಳು ಮತ್ತು ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿರುವವರು ಒಳನುಸುಳಿದ್ದು ಹಿಂಸೆಗೆ ಹೆಚ್ಚು ಪ್ರಚೋದನೆ ನೀಡುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ.

SCROLL FOR NEXT