ದೇಶ

ಜಾರ್ಖಂಡ್ ವಿಧಾನಸಭೆ ಚುನಾವಣೆ: 15 ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಕಾರ್ಯ ಪ್ರಗತಿಯಲ್ಲಿ 

Sumana Upadhyaya

ರಾಂಚಿ: ಜಾರ್ಖಂಡ್ ವಿಧಾನಸಭೆಗೆ ನಡೆಯುತ್ತಿರುವ 5 ಹಂತಗಳ ಚುನಾವಣೆಯಲ್ಲಿ 15 ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಸೋಮವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ.


ಜಾರ್ಖಂಡ್ ನ ಜಮುವಾ, ಬಗೊದರ್, ಗಿರಿದಿಹ್, ದುಮ್ರಿ ಮತ್ತು ತುಂಡಿ ಕ್ಷೇತ್ರಗಳಲ್ಲಿ ಇಂದು ಅಪರಾಹ್ನ 3 ಗಂಟೆಗೆ ಮತದಾನ ಮುಕ್ತಾಯವಾಗಲಿದ್ದು ಉಳಿದ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ನಡೆಯಲಿದೆ.


ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಗಾಗಿ ಸೇನಾಪಡೆಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿನಯ್ ಕುಮಾರ್ ಚೌಭೆ ತಿಳಿಸಿದ್ದಾರೆ.


ರಾಜ್ಯದ 6 ಸಾವಿರದ 101 ಮತಗಟ್ಟೆಗಳ ಪೈಕಿ 587 ಸೂಕ್ಷ್ಮ ಮತ್ತು 405 ಮತಗಟ್ಟೆಗಳು ಅತಿಸೂಕ್ಷ್ಮ ನಕ್ಸಲ್  ಪೀಡಿತ ಮತಗಟ್ಟೆಗಳಾಗಿದ್ದು 546 ನಕ್ಸಲೇತರ ಸೂಕ್ಷ್ಮ ಮತ್ತು 2 ಸಾವಿರದ 665 ಸೂಕ್ಷ್ಮ ಮತಗಟ್ಟೆಗಳಾಗಿವೆ. 


ಇಂದು ನಡೆಯುವ ಮತದಾನದಲ್ಲಿ 47 ಲಕ್ಷದ 85 ಸಾವಿರದ 009 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು ಅವರಲ್ಲಿ 22 ಲಕ್ಷದ 44 ಸಾವಿರದ 134 ಮಹಿಳೆಯರು ಮತ್ತು 81 ತೃತೀಯ ಲಿಂಗಿಗಳು 23 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 221 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.


ಐದನೇ ಮತ್ತು ಕೊನೆಯ ಹಂತದ 16 ಕ್ಷೇತ್ರಗಳಿಗೆ ಚುನಾವಣೆ ಡಿಸೆಂಬರ್ 20ರಂದು ನಡೆಯಲಿದ್ದು ಡಿಸೆಂಬರ್ 23ರಂದು ಮತಎಣಿಕೆ ನಡೆಯಲಿದೆ.

SCROLL FOR NEXT