ದೇಶ

ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಿಸುತ್ತೇವೆ, ಉನ್ನತ ಮಟ್ಟದ ತನಿಖೆಯಾಗಬೇಕು: ಜಾಮಿಯಾ ವಿ.ವಿ ಉಪ ಕುಲಪತಿ 

Sumana Upadhyaya

ನವದೆಹಲಿ: ಇಲ್ಲಿ ಭಾವನಾತ್ಮಕವಾಗಿ ನಷ್ಟವುಂಟಾಗಿದೆ, ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ, ಈ ಹಾನಿಯನ್ನು ತುಂಬಿಕೊಡುವುದು ಹೇಗೆ ಎಂದು ಜಾಮಿಯಾ ವಿಶ್ವವಿದ್ಯಾಲಯದ ಉಪ ಕುಲಪತಿ ನಜ್ಮಾ ಅಖ್ತರ್ ಪ್ರಶ್ನಿಸಿದ್ದಾರೆ.


ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಶ್ವವಿದ್ಯಾಲಯ ಕ್ಯಾಂಪಸ್ ಒಳಗೆ ಪೊಲೀಸರು ಪ್ರವೇಶಿಸಿದ್ದಕ್ಕೆ ವಿರುದ್ಧವಾಗಿ ಎಫ್ಐಆರ್ ದಾಖಲಿಸುತ್ತೇವೆ. ಆಸ್ತಿಪಾಸ್ತಿಗಳನ್ನು ಮರು ನಿರ್ಮಾಣ ಮಾಡಬಹುದು, ಆದರೆ ವಿದ್ಯಾರ್ಥಿಗಳು ಅನುಭವಿಸಿದ ನೋವಿಗೆ ಪರಿಹಾರವೇನು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದರು.


ಕ್ಯಾಂಪಸ್ ನೊಳಗೆ ಅನುಮತಿಯಿಲ್ಲದೆ ಪೊಲೀಸರು ಪ್ರವೇಶಿಸುವ ಹಾಗಿಲ್ಲ. ಅವರು ನಮ್ಮ ವಿದ್ಯಾರ್ಥಿಗಳನ್ನು ಬೆದರಿಸಿ, ಹೆದರಿಸಿದ್ದಾರೆ. ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗಳಿಗೂ ಹಾನಿಯಾಗಿದೆ ಎಂದರು.


ಘಟನೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಮೃತಪಟ್ಟಿಲ್ಲ, ಸುಮಾರು 200 ವಿದ್ಯಾರ್ಥಿಗಳಿಗೆ ಗಾಯವಾಗಿದೆ ಅವರಲ್ಲಿ ಹಲವರು ಜಾಮಿಯಾ ವಿಶ್ವವಿದ್ಯಾಲಯದವರು. ಈ ಸಂಪೂರ್ಣ ಘಟನೆ ಬಗ್ಗೆ ಪೊಲೀಸರ ವಿರುದ್ಧ ನಾವು ಎಫ್ಐಆರ್ ದಾಖಲಿಸುತ್ತೇವೆ, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತೇವೆ ಮತ್ತು ಮಾನವ ಸಂಪನ್ಮೂಲ ಇಲಾಖೆಗೆ ವರದಿ ಸಲ್ಲಿಸುತ್ತೇವೆ ಎಂದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ವಿಡಿಯೊ ಸಂದೇಶ ಕಳುಹಿಸಿದ್ದ ಅವರು, ನಾನು ಈ ಘಟನೆ ವಿರುದ್ಧ ಸಾಧ್ಯವಾದಷ್ಟು ಧ್ವನಿಯೆತ್ತುತ್ತೇನೆ. ನೀವು ಇಲ್ಲಿ ಏಕಾಂಗಿಗಳಲ್ಲ, ನಿಮ್ಮ ಜೊತೆ ನಾವಿದ್ದೇವೆ, ಧೈರ್ಯಗುಂದಬೇಡಿ ಎಂದು ಅಭಯ ನೀಡಿದ್ದರು. 

SCROLL FOR NEXT