ದೇಶ

ನೇಣಿಗೆ ಶರಣಾದ ಮಹಿಳೆ!: ಎನ್ ಆರ್ ಸಿ ಭಯ ಕಾರಣವೆಂದ ಕುಟುಂಬ ಸದಸ್ಯರು! 

Srinivas Rao BV

ಬರ್ಧಮನ್: 36 ವರ್ಷದ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮನ್ ಜಿಲ್ಲೆಯಲ್ಲಿ ನಡೆದಿದೆ. 

ಮೃತ ಮಹಿಳೆ ಶಿಪ್ರಾ ಸಿಕ್ಡರ್ ಕುಟುಂಬ ಸದಸ್ಯರು ಎನ್ ಆರ್ ಸಿ ಭಯದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ.

ಕುಟುಂಬ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ ಮಫ್ಲರ್ ನಿಂದ ಕುತ್ತಿಗೆ ಬಿಗಿದು ನೇಣಿಗೆ ಶರಣಾದ ಸ್ಥಿತಿಯಲ್ಲಿ ಶಿಪ್ರಾ ದೇಹ ಪತ್ತೆಯಾಗಿತ್ತು. ಆಕೆಯನ್ನು ಜಮಾಲ್ಪುರ್ ನ ಆಸ್ಪತ್ರೆಗೆ ಕರೆದೊಯ್ಯಲಾದರೂ, ಆಸ್ಪತ್ರೆಗೆ ಕರೆತರುವ ವೇಳೆಗೆ ಆಕೆ ಮೃತಪಟ್ಟಿದ್ದರು. 

ಮೃತರ ಪತಿ ಸುಭಾಷ್ ಸಿಕ್ಡರ್, ವೃತ್ತಿಯಲ್ಲಿ ಚಾಲಕನಾಗಿದ್ದು ಓರ್ವ ಮಗ ಹಾಗೂ ಓರ್ವ ಮಗಳಿದ್ದಾಳೆ. ಕುಟುಂಬದ ನಿರ್ವಹಣೆಗಾಗಿ ಮಹಿಳೆ ಮನ್ರೇಗಾ ಯೋಜನೆಯಿಂದ ಬರುವ ಆದಾಯವನ್ನು ಆಧಾರವಾಗಿರಿಸಿಕೊಂಡಿದ್ದರು. ಪೌರತ್ವ ತಿದ್ದುಪಡಿ ಮಸೂದೆ ಸಂಸತ್ ನಲ್ಲಿ ಅಂಗೀಕಾರವಾಗುತ್ತಿದ್ದಂತೆಯೇ ಆಕೆಯಲ್ಲಿ ಭಯ ಆವರಿಸಿತ್ತು. ಆಕೆಯ 19 ವರ್ಷದ ಮಗನ ಬಳಿ ಆಧಾರ್ ಕಾರ್ಡ್ ಇತ್ತು. ಆದರೆ ಜನನ ಪ್ರಮಾಣ ಪತ್ರ ಇರಲಿಲ್ಲ ಹಾಗೂ ಮತದಾರರ ಗುರುತಿನ ಚೀಟಿಯೂ ಇರಲಿಲ್ಲ. ಇದರಿಂದಾಗಿ ತನ್ನ ಮಗನನ್ನು ದೇಶದಿಂದ ಹೊರಗೆ ಕಳಿಸುತ್ತಾರೆಂದು ಶಿಪ್ರಾ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಕುಟುಂಬ ಸದಸ್ಯರು. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

SCROLL FOR NEXT