ದೇಶ

ಅತ್ಯಾಚಾರಿಯ ಪುನರ್ ಪರಿಶೀಲನಾ ಅರ್ಜಿ ತಿರಸ್ಕೃತ: ಸುಪ್ರೀಂ ನಿರ್ಧಾರಕ್ಕೆ ನಿರ್ಭಯಾ ತಾಯಿ ಸ್ವಾಗತ

Srinivas Rao BV

ನವದೆಹಲಿ: ನಿರ್ಭಯಾ ಪ್ರಕರಣದ ಆರೋಪಿಗಳಲ್ಲೊಬ್ಬ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು 2012ರ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಆಶಾ ದೇವಿ ಸ್ವಾಗತಿಸಿದ್ದಾರೆ.
  
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿ, ಸುಪ್ರೀಂಕೋರ್ಟ್ ಉತ್ತಮ ನಿರ್ಧಾರ ತೆಗೆದುಕೊಂಡಿದೆ.  ನಾವು ಒಂದು ಹೆಜ್ಜೆ ಮುಂದೆ ಹೋದಂತಾಗಿದೆ.  ನ್ಯಾಯಾಲಯವು ಮರಣದಂಡನೆ ವಿಧಿಸಿದರೆ ಸಂತೋಷವಾಗುತ್ತದೆ, ಎಲ್ಲರ ಚಿತ್ತ ಈಗ ಪಟಿಯಾಲಾ ಹೌಸ್ ನ್ಯಾಯಾಲಯದ ತೀರ್ಪಿನತ್ತ ನೆಟ್ಟಿದೆ ಎಂದು ಹೇಳಿದ್ದಾರೆ. 
  
2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಂದೆ ಬದ್ರಿನಾಥ್ ಸಿಂಗ್, "ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ (ಅಪರಾಧಿಗಳಲ್ಲಿ ಒಬ್ಬ - ಅಕ್ಷಯ್ ಕುಮಾರ್ ಸಿಂಗ್)". ಆದರೆ ನಾವು ಇನ್ನೂ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಪಟಿಯಾಲ ಹೌಸ್ ಕೋರ್ಟ್ ಡೆತ್ ವಾರಂಟ್ ಹೊರಡಿಸುವವರೆಗೆ, ನಾವು ಸಂತೃಪ್ತರಾಗುವುದಿಲ್ಲ. ''  ಆದರೆ, ಅಕ್ಷಯ್ ಅವರ ಪರಿಶೀಲನಾ ಅರ್ಜಿಯನ್ನು ಪಟಿಯಾಲ ಹೌಟ್ ಕೋರ್ಟ್ ತಿರಸ್ಕರಿಸಿ ನಾಲ್ವರು ಅಪರಾಧಿಗಳಿಗೂ ಮರಣದಂಡನೆ ವಿಧಿಸುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. 
  
ನಿರ್ಭಯಾ ಅವರನ್ನು 2012 ಡಿಸೆಂಬರ್ 16 ರಂದು ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ಒಳಗೆ ಆರು ಜನರು ಸಾಮೂಹಿಕ ಅತ್ಯಾಚಾರವೆಸಗಿದ್ದರು ಮತ್ತು ಆಕೆಯನ್ನು ರಸ್ತೆಗೆ ಎಸೆಯುವ ಮೊದಲು ತೀವ್ರವಾಗಿ ಹಲ್ಲೆ ನಡೆಸಿದ್ದರು. ಸಂತ್ರಸ್ತೆ ಡಿಸೆಂಬರ್ 29 ರಂದು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

SCROLL FOR NEXT