ದೇಶ

ದೆಹಲಿ: ಪೌರತ್ವ ಕಾಯ್ದೆ ಕಿಚ್ಚು, ಬಂಧನ ನಂತರ ಪರಾರಿಯಾದ ಭೀಮ್ ಆರ್ಮಿ ಮುಖ್ಯಸ್ಥ

Nagaraja AB

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಜಾಮಾ ಮಸೀದಿ ಬಳಿ ಇಂದು ಮಧ್ಯಾಹ್ನ ಹೈಡ್ರಾಮವೊಂದು ನಡೆದಿದೆ. 

ಪೊಲೀಸ್ ನಿರ್ಬಂಧದ ನಡುವೆಯೂ ಜಂಥರ್ ಮಂಥರ್ ನಿಂದ  ಜಾಮಾ ಮಸೀದಿಯವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ನಂತರ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಪರಾರಿಯಾಗಿದ್ದಾರೆ.

ಚಾಮ್ರಿ ಬಜಾರ್, ಲಾಲ್ ಕಿಲಾ ಮತ್ತು ಜಾಮಾ ಮಸೀದಿ ಮೆಟ್ರೋ ರೈಲು ನಿಲ್ದಾಣದ ಹತ್ತಿರ ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ನಿಲ್ದಾಣಗಳಲ್ಲಿ ರೈಲುಗಳು ನಿಲುಗಡೆ ಮಾಡಲಿಲ್ಲ, ಸಂವಿಧಾನ ಉಳಿಸಿ ಎಂದು ಬರೆದಿದ್ದ ಬ್ಯಾನರ್ ಹಾಗೂ ತ್ರಿವಣ ಧ್ವಜ ಹಿಡಿದ ಪ್ರತಿಭಟನಾಕಾರರು ,ನೂತನ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಾಮಾ ಮಸೀದಿ ಬಳಿ ಜಮಾಯಿಸಿದ ಸಹಸ್ರಾರು ಸಂಖ್ಯೆಯ ಪ್ರತಿಭಟನಾಕಾರರು, ಇನ್ ಕ್ವಿಲಾಬ್, ಜಿಂದಾಬಾದ್, ಸಾರೆ ಜಹಾನ್ ಸೆ ಅಚ್ಚಾ ಮತ್ತಿತರ ಘೋಷಣೆಗಳನ್ನು ಕೂಗಿದರು. ಕೆಲ ಪ್ರತಿಭಟನಾಕಾರರು ಬಾಬಾ ಸಾಹೇಬ್ ಅಂಬೇಡ್ಕರ್, ಕಾನ್ಷಿರಾಮ್, ಮತ್ತು ಭಗತ್ ಸಿಂಗ್ ಪೋಸ್ಟರ್ ಹಿಡಿದು ಪ್ರತಿಭಟಿಸಿದರು. 

ನಿಷೇಧಾಜ್ಞೆ ನಡುವೆಯೂ ಪ್ರತಿಪಕ್ಷಗಳು, ಹೋರಾಟಗಾರರು, ಸಹಸ್ರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ ಇಂದು ಪೊಲೀಸರು ಅನುಮತಿ ನೀಡದಿದ್ದರೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ  ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮಗಳು ಶರ್ಮಿಷ್ಠಾ ಮುಖರ್ಜಿ ಸೇರಿದಂತೆ 50 ಮಂದಿ ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಜಾಮಿಯಾ ಮಿಲಿಯಾ ಇಸ್ಮಾಮಿಯಾ ವಿವಿ ಹೊರಗಡೆ ಇಂದು ಸಹ  ಪ್ರತಿಭಟನೆ ಹಾಗೂ ಸಾಂಸ್ಕ್ರೃತಿಕ ಕಾರ್ಯಕ್ರಮಗಳನ್ನು ಮಾಡಲು ಯೋಚಿಸಲಾಗಿದೆ.

ಇಂದು ಶ್ರುಕವಾರವಾದ್ದರಿಂದ ಬೆಳಗ್ಗೆ ಅಷ್ಟಾಗಿ ಪ್ರತಿಭಟನೆ ತೀವ್ರತೆ ಕಂಡುಬರಲಿಲ್ಲ. ನಮಾಜ್ ನಂತರ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

SCROLL FOR NEXT