ದೇಶ

ಎನ್ಆರ್‌ಸಿ, ಸಿಎಎ ಕುರಿತು 'ದೀದಿ' ನೀವೇಕೆ ಇಷ್ಟು ಹೆದರಿದ್ದೀರಿ: ಮಮತಾಗೆ ಮೋದಿ ಪ್ರಶ್ನೆ

Vishwanath S

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಭಯವಾಗುತ್ತಿರುವುದೇಕೆ ಎಂದು ಲೇವಡಿ ಮಾಡಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಮಮತಾ ದೀದಿ ಕೋಲ್ಕತಾದಿಂದ ವಿಶ್ವಸಂಸ್ಥೆಗೆ ಹೋಗಿದ್ದಾರೆ. ಕೆಲ ವರ್ಷಗಳ ಹಿಂದೆ, ಸಂಸತ್ತಿನಲ್ಲಿ ಅವರು ಬಾಂಗ್ಲಾದೇಶದಿಂದ ಬಂಗಾಳಕ್ಕೆ ಬರುವ ಬಾಂಗ್ಲಾ ನುಸುಳುಕೋರರನ್ನು ತಡೆಯುವಂತೆ ಮೊರೆ ಇಡುತ್ತಿದ್ದರು. ದೀದಿ ನಿಮಗೇನಾಯಿತು? ನೀವೇಕೆ ಬದಲಾದಿರಿ? ವದಂತಿಗಳನ್ನೇಕೆ ಹಬ್ಬಿಸುತ್ತಿದ್ದೀರಿ?’ ಎಂದು ಮೋದಿ ಪ್ರಶ್ನಿಸಿದರು.

ಕಳೆದ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದಿಸಲಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಯಾಗಿ ಕಾಯ್ದೆಯಾಗಿ ಜಾರಿಗೆ ಬಂದಿದ್ದು, ಜನರ ತೀರ್ಪನ್ನು ಮತ್ತು ಸಂಸತ್ತನ್ನು ಎಲ್ಲರೂ ಗೌರವಿಸಬೇಕು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ ಮತ್ತು ಸೌಲಭ್ಯವನ್ನು ಹಂಚುವಾಗ ಜನರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ? ಎಲ್ಲರನ್ನೊಳಗೊಂಡ ಎಲ್ಲರ ವಿಕಾಸ ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವರು ನಾವು. ಪ್ರಧಾನಿಯಾದ ನಂತರ ನಾನು ಮಾಡಿರುವ ಕೆಲಸಗಳನ್ನು ಪರೀಕ್ಷಿಸಿ ಎಂದು ಪ್ರತಿಪಕ್ಷದವರಿಗೆ ನಾನು ಸವಾಲು ಹಾಕುತ್ತೇನೆ.

ಇನ್ನು ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರಿಗೆ ಸಹಾಯವಾಯಿತು. ಆ ಯೋಜನೆ ನೀಡುವಾಗ ನೀವು ಯಾವ ಜಾತಿ, ಯಾವ ಧರ್ಮ ಎಂದು ಕೇಳಲಿಲ್ಲ, ಹೀಗಿರುವಾಗ ನೀವು ನಮ್ಮನ್ನು ಇಷ್ಟೊಂದು ಏಕೆ ದ್ವೇಷಿಸುತ್ತಿದ್ದೀರಿ, ನೀವು ಜನರನ್ನು ಏಕೆ ಹಾದಿತಪ್ಪಿಸುತ್ತೀರಿ, ಇದರಿಂದ ನಿಮಗೆ ಏನು ಲಾಭವಿದೆ ಎಂದು ವಿರೋಧ ಪಕ್ಷದವರನ್ನು ಮೋದಿ ತರಾಟೆ ತೆಗೆದುಕೊಂಡರು.

SCROLL FOR NEXT