ದೇಶ

ಪಿಒಕೆ ಮೇಲೆ ದಾಳಿ ಮಾಡಿ, ಗ್ರಾಮಗಳನ್ನು ವಶಪಡಿಸಿಕೊಂಡಿಲ್ಲ: ಭಾರತೀಯ ಸೇನೆ ಸ್ಪಷ್ಟನೆ

Srinivasamurthy VN

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ ಅಲ್ಲಿನ ಕೆಲ ಗ್ರಾಮಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿಗಳನ್ನು ಭಾರತೀಯ ಸೇನೆ ಭಾನುವಾರ ತಳ್ಳಿ ಹಾಕಿದ್ದು, ಅಂತಬಹ ವರದಿಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಸೇನಾ ಕಾರ್ಯಾಚರಣೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿವಿಧ ಮಾಹಿತಿಗಳ ಹಿನ್ನಲೆಯಲ್ಲಿ ಈ ಕುರಿತಂತೆ ಭಾನುವಾರ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ, 'ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಭೂಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪಾಕಿಸ್ತಾನ ಮೂಲದ ಸಂಸ್ಥೆಗಳಿಂದ ಹರಡಲಾಗಿದೆ. ಇದು ಅವರ ಮತ್ತೊಂದು ಕುತಂತ್ರಿ ಬುದ್ಧಿ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಅಂತೆಯೇ 'ಸಾಕಷ್ಟು ತಪ್ಪು ಮಾಹಿತಿ ದೇಶಾದ್ಯಂತ ಹರಡಲಾಗಿದೆ. ಸೇನೆಯು ಗಡಿಯಲ್ಲಿ ದಾಳಿ ನಡೆಸಿ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಗ್ರಾಮವೊಂದನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗಿದೆ. ಇಂತಹ ನಕಲಿ ಸುದ್ದಿಗಳನ್ನು ಪಾಕ್​ ಮೂಲದ ಸಂಸ್ಥೆಗಳು ಹರಡಿವೆ. ಇದು ಅವರ ಕಾರ್ಯಸೂಚಿಯ ಒಂದು ಭಾಗವಾಗಿದೆ ಎಂದು ಸೇನೆ ಕಿಡಿಕಾರಿದೆ ಎಂದು ಮೂಲಗಳು ತಿಳಿಸಿವೆ. 

ಇತ್ತೀಚೆಗಷ್ಟೇ ಸುಳ್ಳು ವದಂತಿಗಳ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಸೇನಾ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​, 'ನಕಲಿ ಸುದ್ದಿಗಳನ್ನು ಎದುರಿಸುವುದು ಸೇನೆಯ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಈ ವಿಚಾರವಾಗಿ  ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದ್ದಾರೆ. 

SCROLL FOR NEXT