ದೇಶ

ಪೌರತ್ವ ತಿದ್ದುಪಡಿ ವಿರೋಧಿಸಿ ಈದ್ಗಾ ಮೈದಾನದಲ್ಲಿ ಬೃಹತ್ ಸಮಾವೇಶ; ಹಲವೆಡೆ ಸ್ವಯಂ ಪ್ರೇರಿತ ಬಂದ್

Srinivas Rao BV

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ ಸಿ ವಿರೋಧಿಸಿ ರಾಜಧಾನಿ ಬೆಂಗಳೂರಿನಲ್ಲಿ ಸ್ವಯಂ ಪ್ರೇರಿತ ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿ, ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿಂದು ಶಿವಾಜಿನಗರ, ಆರ್.ಟಿ.ನಗರ, ವಸಂತನಗರ, ಚಾಮರಾಜಪೇಟೆ, ಗೌರಿಪಾಳ್ಯ, ಗುರಪ್ಪನಪಾಳ್ಯ, ಥಣಿಸಂದ್ರ ಸೇರಿದಂತೆ ಹಲವು ಕಡೆ ಮುಸ್ಲಿಮರು ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬಳಿಕ ಇಲ್ಲಿನ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ಆಯೋಜಿಸಿದ್ದ, ನಾವು ಭಾರತದ ಜನರು ಸಿಎಎ ಮತ್ತು ಎನ್ ಆರ್ ಸಿ ಅನ್ನು ತಿರಸ್ಕರಿಸಿ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಇದರಿಂದ ವಸಂತನಗರ, ಕಂಟೋನ್ಮೆಂಟ್‌, ಜೆ.ಸಿ.ರಸ್ತೆ, ಮೇಕ್ರಿ ವೃತ್ತ ಸೇರಿದಂತೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.

ಇದರಿಂದ ವಾಹನ ಪ್ರಯಾಣಿಕರು ಪರದಾಡುವಂತಾಯಿತು. ಸರ್ವದರ್ಮ ಸಮಾನತೆಯ ಬಗ್ಗೆ ಮಾತನಾಡುವ ನಾವುಗಳು ಈಗ, ಧರ್ಮಗಳ ವಿಂಗಡನೆ ಮಾಡುವ ಕಾಯ್ದೆಯ ವಿರುದ್ಧ ಬೀದಿಗಳಿಯಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಧರ್ಮವನ್ನು ಪ್ರಭುತ್ವದಲ್ಲಿ ತರಲಾಗಿದೆ. ಅದರ ಪರಿಣಾಮವಿಂದು ಅನುಭವಿಸುತ್ತಿದ್ದೇವೆ. ಸಿಎಎ ಮುಸ್ಲಿಂ ವಿರುದ್ಧ ಅಷ್ಟೇ ಅಲ್ಲ ಆದಿವಾಸಿಗಳ, ಬುಡಕಟ್ಟುಗಳ ವಿರುದ್ಧವೂ ಕಾಯ್ದೆ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪ್ರತಿಭಟನಕಾರರು ಹೇಳಿದರು. ಸಂವಿಧಾನವನ್ನು ತೆಗೆಯಲು ಸಂಘಪರಿವಾರ ಮತ್ತು ಬಿಜೆಪಿ ಕೆಲಸ ಮಾಡುತ್ತಿದೆ.

ಇದರ ವಿರುದ್ಧ ನಾವು ಹೋರಾಟ ಮುಂದುವರೆಸಬೇಕು.ಜೊತೆಗೆ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಾವು ಜನ ಜಾಗೃತಿ ಮೂಡಿಸಬೇಕು ಎಂದು ಪ್ರತಿಭಟನಾಕಾರರು ನುಡಿದರು. ಶಾಂತಿಯುತ ಪ್ರತಿಭಟನೆ: ನಗರದ ವ್ಯಾಪ್ತಿಯಲ್ಲಿ ನಡೆದ ಸಿಎಎ ವಿರೋಧಿಸಿ ಪ್ರತಿಭಟನೆಯೂ ಬಹುತೇಕ ಕಡೆ ಶಾಂತಿಯುತ ಪ್ರತಿಭಟನೆ ನಡೆಯಿತು. ಇನ್ನೂ, ವಿವಿಧ ಕಡೆಯಿಂದ ಕಾಲ್ನಡಿಗೆ ಮೂಲಕ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನಕ್ಕೆ ಆಗಮಿಸಿದ ಪ್ರತಿಭಟನಾಕಾರ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಗರದ ಹಲವು ಕಡೆ ದೇವಾಲಯ, ಚರ್ಚ್ ಹಾಗೂ ಮಸೀದಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಅದೇ ರೀತಿ, ಬೃಹತ್ ಕಟ್ಟಡ ಮತ್ತು ಗಾಜಿನ ಕಟ್ಟಡಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದರು.

ಎಲ್ಲಾ ಕಡೆ ರಾಷ್ಟ್ರಧ್ವಜ ರಾರಾಜಿಸುತ್ತಿದ್ದುದು ಕಂಡುಬಂತು. ಶಾಸಕ ಹ್ಯಾರಿಸ್‌ಗೆ ಅವಕಾಶ ನಿರಾಕರಣೆ; ಎನ್‌ಆರ್‌ಸಿ ವಿರೋಧಿಸಿ ಖುದ್ದೂಸ್ ಸಾಹೇಬ್‌ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲು ಶಾಸಕ ಎನ್‌.ಎ.ಹ್ಯಾರಿಸ್‌ ಆಗಮಿಸಿದ್ದರು. ಆದರೆ ಇದು ಪಕ್ಷಾತೀತವಾದ ಕಾರ್ಯಕ್ರಮವಾಗಿದ್ದು, ವೇದಿಕೆಯಲ್ಲಿ ರಾಜಕೀಯ ವ್ಯಕ್ತಿಗಳಿಗೆ ಅವಕಾಶ ನೀಡಿಲ್ಲ. ಆದ್ದರಿಂದ ನೀವು ಮರಳಿ ಹೋಗಿ ಎಂದು ಕಾರ್ಯಕ್ರಮ ಆಯೋಜಕರು ಹ್ಯಾರಿಸ್‌ ಅವರನ್ನು ಹಿಂದಕ್ಕೆ ಕಳುಹಿಸಿದ ಘಟನೆಯೂ ನಡೆಯಿತು.

SCROLL FOR NEXT