ದೇಶ

ಮತ್ತೊಮ್ಮೆ ಮಹಾ ಡಿಸಿಎಂ ಆಗಲಿದ್ದಾರೆ ಅಜಿತ್ ಪವಾರ್! ಡಿ.30ಕ್ಕೆ ಪ್ರಮಾಣವಚನ: ವರದಿ

Raghavendra Adiga

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಅವರು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಡಿಸೆಂಬರ್ 30 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚನೆ ಮಾತುಕತೆಯ ಅಂತಿಮ ಹಂತದಲ್ಲಿದ್ದಾಗ ನವೆಂಬರ್‌ ತಿಂಗಳ ಒಂದು ಮುಂಜಾನೆ ನಡೆದ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಪ್ರಮಾಣವಚನದ ವೇಳೆ ಅಜಿತ್ ಪವಾರ್ ಸಹ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಆದರೆ ರಾಜ್ಯದಲ್ಲಿ ಬಿಜೆಪಿ-ಎನ್‌ಸಿಪಿ ಸಮ್ಮಿಶ್ರ ಸರ್ಕಾರ ರಚನೆಗೆ ಅಗತ್ಯ ಶಾಸಕರ ಬೆಂಬಲ ದೊರಕದ ಕಾರಣ  ಪವಾರ್ ಅವರ ಅವಧಿ ಕೇವಲ 80 ಗಂಟೆಗಳ ಕಾಲದಲ್ಲಿ ಮುಗಿದು ಹೋಗಿತ್ತು.

ರಾಜೀನಾಮೆ ನೀಡಿ ಎನ್‌ಸಿಪಿಪಾಳಯಕ್ಕೆ ಮರಳಿದ್ದ ಅಜಿತ್ ನವೆಂಬರ್ 28 ರಂದು ಉದ್ಧವ್ ಠಾಕ್ರೆ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡರು ಆದರೆ ತಾವು ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಇದನ್ನು ಪಕ್ಷದ ಮುಖಂಡರಾದ ಶರದ್ ಪವಾರ್ "ಪ್ರಜ್ಞಾಪೂರ್ವಕ ನಿರ್ಧಾರ" ಎಂದು ಬಣ್ಣಿಸಿದ್ದರು.

ಇದೀಗ ಉದ್ದವ್ ಹಾಗೂ ಶರದ್ ಪವಾರ್ ನಡುವೆ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಅಜಿತ್ ಪವಾರ್ ಕುರಿತು ನಿರ್ಧಾರ ತೆಗೆದುಕೊಳ್ಲಲಾಗಿದೆ ಎಂದು ತಿಳಿದುಬಂದಿದೆ.

ಮಂಗಳವಾರ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ತಮ್ಮ ಪಕ್ಷದ ಕಾರ್ಯಕರ್ತರು ಅಜಿತ್ ರಾಜ್ಯದ ಉಪಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ ಎಂದು ಪುನರುಚ್ಚರಿಸಿದರು.

"ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಕ್ಯಾಬಿನೆಟ್ ವಿಸ್ತರಣೆ ನಡೆಯಲಿದೆ. ಮುಖ್ಯಮಂತ್ರಿ ಯಾರು ಯಾವ  ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ನಿರ್ಧರಿಸುತ್ತಾರೆ.ಎನ್‌ಜಿಪಿ ಪಕ್ಷದ ಕಾರ್ಯಕರ್ತರ ಆಶಯವೆಂದರೆ ಅಜಿತ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಬೇಕು" ಎಂದು ಮಲಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

SCROLL FOR NEXT