ದೇಶ

ಸಿಎಎ ಪ್ರತಿಭಟನೆ: ಅಮಾಯಕರ ಮುಟ್ಟಲ್ಲ.. ಆದರೆ..: ಪ್ರತಿಭಟನಾಕಾರರಿಗೆ ಯುಪಿ ಪೊಲೀಸ್ ಎಚ್ಚರಿಕೆ

Srinivasamurthy VN

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೇದ್ದಿದ್ದು, ಈ ವೇಳೆ ಪ್ರತಿಭಟನಾಕಾರರಿಗೆ ಉತ್ತರ ಪ್ರದೇಶ ಡಿಜಿಪಿ ಒಪಿ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಪ್ರಸ್ತುತ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹತೋಟಿಯಲ್ಲಿದೆ. ರಾಜ್ಯ ಶಾಂತಿಯುತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ವಿನಾ ಕಾರಣ ಉತ್ತರ ಪ್ರದೇಶ ಪೊಲೀಸರು ಯಾರನ್ನೂ ಮುಟ್ಟುವುದಿಲ್ಲ. ಆದರೆ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡುವವರನ್ನು ಯಾವುದೇ ರೀತಿಯ ಮುಲಾಜಿಲ್ಲದೇ ಕಾನೂನು ರೀತಿಯ ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಂತೆಯೇ ರಾಜ್ಯದ ಹಲವೆಡೆ ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿರುವ ಕುರಿತು ಮಾತನಾಡಿದ ಅವರು, ಒಟ್ಟು 21 ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಪುನಃ ಸೇವೆಗಳನ್ನು ಮರು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಪೊಲೀಸರು ಅಮಾಯಕರನ್ನು ಥಳಿಸಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂಬ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಆರೋಪವನ್ನು ತಳ್ಳಿ ಹಾಕಿದ ಒಪಿ ಸಿಂಗ್ ಅವರು, ಉತ್ತರ ಪ್ರದೇಶ ಪೊಲೀಸರು ಅಮಾಯಕನ್ನು ಮುಟ್ಟುವುದಿಲ್ಲ. ಇದಕ್ಕೆ ನಾನು ಮಾತು ನೀಡುತ್ತಿದ್ದೇನೆ. ಆದರೆ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡುವವರನ್ನು ಯಾವುದೇ ರೀತಿಯ ಮುಲಾಜಿಲ್ಲದೇ ಕಾನೂನು ರೀತಿಯ ಕ್ರಮಕ್ಕೆ ಒಳಪಡಿಸಲಾಗುತ್ತದೆ. ಇದೇ ಕಾರಣಕ್ಕೆ ಹಲವು ಸಂಘಟನೆಗಳ ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ. ಪಿಎಫ್ಐ ಅಥವಾ ಇನ್ನಾವುದೇ ರಾಜಕೀಯ ಪಕ್ಷಗಳಾಗಲಿ... ಅದಕ್ಕೂ ನಮಗೂ ಸಂಬಂಧವಿಲ್ಲ, ಆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

SCROLL FOR NEXT