ದೇಶ

ಇಂದು 'ಮಹಾ' ಸಚಿವ ಸಂಪುಟ ವಿಸ್ತರಣೆ: ಅಜಿತ್ ಪವಾರ್ ಉ.ಮು ಹುದ್ದೆ, ಆದಿತ್ಯ ಠಾಕ್ರೆ, ಅಶೋಕ್ ಚವಾಣ್ ಗೆ ಸಚಿವ ಭಾಗ್ಯ

Sumana Upadhyaya

ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ಮೊದಲ ಬಾರಿಗೆ ವಿಸ್ತರಣೆಯಾಗುತ್ತಿದ್ದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.


ಮುಂಬೈಯ ವೊರ್ಲಿ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಆದಿತ್ಯ ಠಾಕ್ರೆ ರಾಜ್ಯದ ಅತ್ಯಂತ ಕಿರಿಯ ಸಚಿವ ಎನಿಸಿಕೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ವಿಧಾನ ಭವನದಲ್ಲಿ 36 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.


ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಡಿ ಕಾಂಗ್ರೆಸ್ ನಾಯಕರಾದ ವಿಜಯ್ ವಡೆಟ್ಟಿವರ್, ಕೆ ಸಿ ಪಡ್ವಿ, ಅಮಿತ್ ದೇಶ್ ಮುಖ್, ಸುನಿಲ್ ಕೇದಾರ್, ಯಶೋಮತಿ ಠಾಕೂರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.


ಕಾಂಗ್ರೆಸ್ ಶಾಸಕರಾದ ವರ್ಷ ಗಾಯಕ್ ವಾಡ್, ಅಸ್ಲಮ್ ಶೈಖ್, ಸಟೆಜ್ ಪಾಟೀಲ್ ಮತ್ತು ವಿಶ್ವಜಿತ್ ಕಡಮ್ ಅವರಿಗೆ ಸಚಿವ ಸ್ಥಾನ ದೊರಕಲಿದೆ. ಈ ಮಧ್ಯೆ, ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಸುಮಾರು ಒಂದು ತಿಂಗಳ ರಾಜಕೀಯ ಪ್ರಹಸನದ ನಂತರ ಕಳೆದ ನವೆಂಬರ್ 28ರಂದು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇವರ ಜೊತೆ ಎನ್ ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯಿಂದ ತಲಾ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.


ಮೂರೂ ಪಕ್ಷಗಳ ಮಧ್ಯೆ ಆದ ಸೀಟು ಹಂಚಿಕೆ ಒಪ್ಪಂದದಂತೆ ಶಿವಸೇನೆಗೆ ಸಿಎಂ ಹುದ್ದೆ ಹೊರತುಪಡಿಸಿ 15 ಸಚಿವ ಸ್ಥಾನ, ಎನ್ ಸಿಪಿಗೆ 15 ಮತ್ತು ಕಾಂಗ್ರೆಸ್ ಗೆ 12 ಸಚಿವ ಸ್ಥಾನ ದೊರಕಲಿದೆ.ಮಹಾರಾಷ್ಟ್ರ ವಿಧಾನಸಭೆಗೆ ಗರಿಷ್ಠ 43 ಶಾಸಕರು ಸಚಿವರಾಗಬಹುದು. 

SCROLL FOR NEXT