ದೇಶ

ಹೊಸ ಹುದ್ದೆ ಬಳಿಕ, ಬಿಪಿನ್ ರಾವತ್ ನೇತೃತ್ವದ ಹೊಸ ಇಲಾಖೆ ತೆರೆದ ಸರ್ಕಾರ

Lingaraj Badiger

ನವದೆಹಲಿ: ಹೊಸದಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿಡಿಎಸ್) ಹುದ್ದೆ ಸೃಷ್ಟಿಸಿ, ಆ ಹುದ್ದೆಗೆ ಜನರಲ್ ಬಿಪಿನ್ ರಾವತ್ ಅವರನ್ನು  ನೇಮಕ ಮಾಡಿರುವ ಸರ್ಕಾರ, ಇದೀಗ ಮಿಲಿಟರಿ ವ್ಯವಹಾರ ಎಂಬ ಹೊಸ ಇಲಾಖೆಯನ್ನೇ ಅವರಿಗಾಗಿ ಸೃಷ್ಟಿಸಿದೆ.

ಹೊಸ ಹುದ್ದೆಯ ಬಳಿಕ ಸರ್ಕಾರ ಹೊಸ ಇಲಾಖೆ ತೆರೆದಿದೆ. ಹೊಸ ಇಲಾಖೆಯ ಕಾರ್ಯಚೌಕಟ್ಟಿನ ಪ್ರಕಾರ, ಇದು ಭೂಸೇನೆ, ನೌಕಾಪಡೆ, ವಾಯುಪಡೆಗಳ ನಡುವೆ ಸಮನ್ವಯದ ಕಾರ್ಯ ಸಾಧನೆ ಮತ್ತು ಸೇನಾ ಪಡೆಗಳಿಗೆ ಬೇಕಾಗುವ ಖರೀದಿ, ಮದ್ದು ಗುಂಡು ಮುಂತಾದ ಅಗತ್ಯದ ಕಡೆ ಇಲಾಖೆ ಗಮನ ಹರಿಸಲಿದೆ ಎಂದೂ  ಹೇಳಲಾಗಿದೆ.

ಕೇಂದ್ರ ಸರ್ಕಾರ ಸೇನೆಯ ಸುಧಾರಣಾ ಕ್ರಮಕ್ಕೆ ಮುನ್ನುಡಿ ಬರೆದಿದ್ದು, ಈ ಹೊಸ ಇಲಾಖೆ ಈ ದಿಶೆಯಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಎಂದೂ ಬಣ್ಣಿಸಲಾಗುತ್ತಿದೆ.

ಸೇನಾ ಮುಖ್ಯಸ್ಥರಾಗಿ ಮೂರು ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ ಬಿಪಿನ್ ರಾವತ್ ಅವರು ದೇಶದ ಮೂರು ಸೇನಾಪಡೆಗಳ(ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚಿಗಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ಸೃಷ್ಟಿಸಿದ್ದು, ಈ ಮೂರೂ ಸೇನೆಗಳಲ್ಲಿ ಸಹಕಾರ, ಸಮನ್ವಯತೆ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ನೀಡಲಾಗಿದೆ. 

ತುರ್ತು ಸಂದರ್ಭದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲು ಈ ಹುದ್ದೆ ಸಹಾಯಕವಾಗುವ ನಿರೀಕ್ಷೆ ಇದೆ. ಸರ್ಕಾರವು ಮೂರು ಸೇನಾಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಪ್ರಮೇಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥರೇ ಸರ್ಕಾರದ ಪಾಲಿಗೆ ಏಕಗವಾಕ್ಷಿಯಾಗಿರಲಿದ್ದಾರೆ.

SCROLL FOR NEXT