ದೇಶ

ಗೋವಾ ಸಿಎಂ ಪರಿಕ್ಕರ್ ಏಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗಕ್ಕೆ ದಾಖಲು

Lingaraj Badiger
ನವದೆಹಲಿ: ಮೂಗಿಗೆ ಪೈಪ್ ಹಾಕಿಕೊಂಡೇ ಬುಧವಾರ ಬಜೆಟ್ ಮಂಡಿಸಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗಕ್ಕೆ ದಾಖಲಾಗಿದ್ದಾರೆ.
ಏಮ್ಸ್ ಆಸ್ಪತ್ರೆಯ ಮೂಲಗಳ ಪ್ರಕಾರ, ಪರಿಕ್ಕರ್ ಅವರು, ಮೂರು ದಿನಗಳ ವಿಧಾನಸಭೆ ಅಧಿವೇಶನ ಮುಗಿದ ಕೂಡಲೇ ಗುರುವಾರ ಸಂಜೆ ದೆಹಲಿಗೆ ತೆರಳಿ ಏಮ್ಸ್​ಗೆ ದಾಖಲಾಗಿದ್ದಾರೆ.
ಕ್ಯಾನ್ಸರ್ ತಜ್ಞ ಡಾ.ಅತಲ್ ಶರ್ಮಾ ಅವರು ಗೋವಾ ಸಿಎಂಗೆ ಚಿಕಿತ್ಸೆ ನೀಡುತ್ತಿದ್ದು, ಇನ್ನು ಕೆಲವು ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎನ್ನಲಾಗಿದೆ.
ಗೋವಾ ಬಜೆಟ್ ಅಧಿವೇಶನ ಹಿನ್ನೆಲೆ ಅವರಿಗೆ ನೀಡಬೇಕಿದ್ದ ಚಿಕಿತ್ಸೆ ವಿಳಂಬವಾಗಿತ್ತು. ಈ ಹಿನ್ನೆಲೆ ಅವರು ತುರ್ತಾಗಿ ಚಿಕಿತ್ಸೆ ಮುಂದುವರಿಸಲು ದೆಹಲಿಗೆ ತೆರಳಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 
ಕಳೆದ ಬುಧವಾರ ಮೂಗಿಗೆ ಪೈಪ್ ಹಾಕಿಕೊಂಡೇ ಸಿಎಂ ಪರಿಕ್ಕರ್ ಬಜೆಟ್ ಮಂಡಿಸಿದ್ದರು. ಕೆಲಸದ ಮೇಲಿನ ಅವರ ಬದ್ಧತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
SCROLL FOR NEXT