ರಾಮಚಂದ್ರಾಪುರಂ: ದೇಗುಲದಲ್ಲಿರುವ ಬೃಹತ್ ವಿಗ್ರಹದಲ್ಲಿ ಅಪಾರ ಪ್ರಮಾಣದ ವಜ್ರವಿದೆ ಎಂಬ ಆಸೆಯಿಂದ ಖತರ್ನಾಕ್ ಖದೀಮರ ಗ್ಯಾಂಗ್ ವೊಂದು ಬರೊಬ್ಬರಿ 1 ಸಾವಿರ ಕೆಜಿ ತೂಕದ ನಂದಿ ವಿಗ್ರಹವನ್ನು ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರಂನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಪುರಾತನ ಪ್ರಸಿದ್ಧ ಶ್ರೀ ಅಗಸ್ಥೇಶ್ವರ ಸ್ವಾಮಿ ದೇಗುಲದ ಅವರಣದಲ್ಲಿದ್ದ ಬೃಹತ್ ನಂದಿ ವಿಗ್ರಹವನ್ನು ಖದೀಮರ ಕದ್ದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಸುಮಾರು 15 ಮಂದಿಯ ಖತರ್ನಾಕ್ ಕದೀಮರ ಗ್ಯಾಂಗ್ ಸಂಚು ರೂಪಿಸಿ ಸುಮಾರು 1 ಸಾವಿರ ಕೆಜಿ ತೂಕದ ನಂದಿ ವಿಗ್ರಹವನ್ನು ಕದ್ದಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಎಲ್ಲ 15 ಮಂದಿ ಕಳ್ಳರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಕಳೆದ ಜನವರಿ 24ರಂದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರಂನ ಸುಮಾರು 400 ವರ್ಷಗಳಷ್ಟು ಹಳೆಯ ಪುರಾತನ ಪ್ರಸಿದ್ಧ ಶ್ರೀ ಅಗಸ್ಥೇಶ್ವರ ಸ್ವಾಮಿ ದೇಗುಲದಲ್ಲಿ ಬೃಹತ್ ಕಳ್ಳತನ ನಡೆದಿತ್ತು. ದೇಗುಲದ ಅರ್ಚಕರು ಬಾಗಿಲು ತೆಗೆದಾಗ ದೇಗುಲದ ಆವರಣದಲ್ಲಿದ್ದ ಗ್ರಾನೈಟ್ ಕಲ್ಲಿನ ಬೃಹತ್ ನಂದಿ ವಿಗ್ರಹನಾಪತ್ತೆಯಾಗಿದ್ದು. ಇದರಿಂದ ಆಘಾತಕ್ಕೊಳಗಾದ ಅರ್ಚಕರು ಕೂಡಲೇ ಪೊಲೀಸರಿದೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಈ ವೇಳೆ ದೇಗುಲದ ಸಿಸಿಟಿವಿ ಕುರಿತು ಕೇಳಿದಾಗ ದೇಗುಲದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರಲಿಲ್ಲ ಎಂದು ತಿಳಿದುಬಂದಿದೆ. ದೇಗುಲಕ್ಕೆ ಆಗಮಿಸುತ್ತಿದವರ ವಿಚಾರಣೆ ನಡೆಸಿದ ಪೊಲೀಸರಿಗೆ ಕಳ್ಳರ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಪೈಕಿ ಓರ್ವ ಕಳ್ಳನನ್ನು ಹಿಡಿದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ಎಲ್ಲ 15 ಮಂದಿ ಕಳ್ಳರನ್ನೂ ಪೊಲೀಸರು ಬಂಧಿಸಿದ್ದಾರೆ.
ಇನ್ನು ವಿಚಾರಣೆ ವೇಳೆ ಕಳ್ಳರು ಕಳ್ಳತನದ ಮಾಹಿತಿ ನೀಡಿದ್ದು, ದೇಗುಲದ ಆವರಣದಲ್ಲಿರುವ ನಂದಿ ವಿಗ್ರಹದಲ್ಲಿ ವಜ್ರದ ಹರಳುಗಳನ್ನು ಬಚ್ಚಿಡಲಾಗಿದೆ ಎಂದು ಹೇಳಲಾಗುತ್ತಿತ್ತು. ಇದೇ ಕಾರಣಕ್ಕೆ ನಾವು ವಿಗ್ರಹವನ್ನು ಕದ್ದು ಸಮೀಪದ ನಾಲೆಯಲ್ಲಿ ಅಡಗಿಸಿಟ್ಟೆವು. ಬಳಿಕ ವಿಗ್ರಹವನ್ನು ಒಡೆದು ನೋಡಿದಾಗ ಅಲ್ಲಿ ನಮಗೆ ಏನೂ ಸಿಗಲಿಲ್ಲ ಎಂದು ಹೇಳಿದ್ದಾರೆ. ಇನ್ನು ದೂರು ಸಲ್ಲಿಕೆ ಮಾಡಿರುವ ದೇಗುಲ ಆಡಳಿತ ಮಂಡಳಿ ಕಳ್ಳತನದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos