ದೇಶ

ಹಳಿ ತಪ್ಪಿದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು, 6 ಸಾವು, ಹಲವರಿಗೆ ಗಾಯ

Srinivasamurthy VN
ಪಾಟ್ನಾ: ಬಿಹಾರದಲ್ಲಿ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ರೈಲಿನಲ್ಲಿದ್ದ ಸುಮಾರು 6 ಮಂದಿ ಪ್ರಯಾಣಿಕರು ಧಾರುಣವಾಗಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ಬಿಹಾರದ ಸೋನಪುರ ರೈಲು ನಿಲ್ಜಾಣದ ವ್ಯಾಪ್ತಿಯಲ್ಲಿ ಹಳಿ ತಪ್ಪಿದ್ದು, ರೈಲಿನ ಸುಮಾರು 9 ಬೋಗಿಗಳು ನೆಲಕ್ಕುರುಳಿವೆ. ಪರಿಣಾಮ ಈ ಬೋಗಿಗಳಲ್ಲಿದ್ದ ಕನಿಷ್ಟ 6 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 
ಇಂದು ಬೆಳಗಿನ ಜಾವ ಸುಮಾರು 3.52ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪ್ರಯಾಣಿಕರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಅಪಘಾತ ಸಂಭವಿಸಿದೆ. ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ವೈಶಾಲಿ ಬಳಿ ಹಳಿತಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 9 ಬೋಗಿಗಳಲ್ಲಿ ಒಂದು ಜನರಲ್ ಬೋಗಿ, ಮೂರು ಸ್ಲೀಪರ್ ಬೋಗಿ, ಒಂದು ಎಸಿ ಕೋಚ್ ಇದೆ ಎಂದು ತಿಳಿದುಬಂದಿದೆ. ಸೋನಪುರ ಮತ್ತು ಬರೌನಿಯಲ್ಲಿರುವ ವೈದ್ಯರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ.
ವಿಚಾರ ತಿಳಿದ ಘಟನಾ ಪ್ರದೇಶಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೇ ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದು, ರೈಲಿನಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಇನ್ನು ದುರ್ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
SCROLL FOR NEXT