ದೇಶ

ಗೋವಿಂದಾ.... ಗೋವಿಂದ...! ತಿರುಪತಿ ಸನ್ನಿಧಿಯಲ್ಲಿ ಮೂರು ವಜ್ರಖಚಿತ ಚಿನ್ನದ ಕಿರೀಟ ನಾಪತ್ತೆ!

Srinivas Rao BV
ತಿರುಪತಿ:  ಇತ್ತೀಚಿನ ದಿನಗಳಲ್ಲಿ ತಿರುಪತಿ ದೇವಾಲಯದಲ್ಲಿ ಶ್ರೀವಾರಿ ಚಿನ್ನಾಭರಣಗಳು ನಾಪತ್ತೆಯಾಗಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಈ ಬೆನ್ನಲ್ಲೇ ತಿರುಪತಿಯ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ 3 ವಜ್ರಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿದೆ. 
ಟಿಟಿಡಿ ಅಡಿಯಲ್ಲಿ ಬರುವ ಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ ಕಿರೀಟಗಳು ನಾಪತ್ತೆಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.  ದೇವಸ್ಥಾನದ ಪೂಜಾ ಕಾರ್ಯಗಳು ಹಾಗೂ ಭಕ್ತರ ದರ್ಶನದ ಬಳಿಕ ಅಂದ್ರೆ 5 ಗಂಟೆ ಸುಮಾರಿಗೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿತ್ತು. ನಂತರ 45 ನಿಮಿಷ ಬಿಟ್ಟು ಮತ್ತೆ ಪೂಜಾ ಕಾರ್ಯಗಳಿಗಾಗಿ ದೇವಸ್ಥಾನದ ಬಾಗಿಲು ತೆರೆದ ವೇಳೆ ಕಿರೀಟಗಳು ನಾಪತ್ತೆಯಾಗಿದೆ ಎಂದು ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಭಾಸ್ಕರ್ ಮಾಹಿತಿ ನೀಡಿದ್ದಾರೆ. 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಪೋಲಾ ಭಾಸ್ಕರ್ ಸಹಾಯಕ ಮುಖ್ಯ ವಿಜಿಲೆನ್ಸ್ ಮತ್ತು ಭದ್ರತಾ ಅಧಿಕಾರಿಯ ಬಳಿ ಘಟನೆಗೆ ಸಂಬಂಧಿಸಿದಂತೆ ವರದಿ ಕೇಳಲಾಗಿದೆ ಎಂದು ತಿಳಿಸಿದ್ದಾರೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎಕೆ ಸಿಂಘಾಲ್, ಅಧ್ಯಕ್ಷ ಪಿ ಸುಧಾಕರ್ ಯಾದವ್ ಅವರು ಘಟನೆ ಬಗ್ಗೆ ವಿವರಣೆ ಪಡೆದಿದ್ದು, ಟಿಟಿಡಿ ಮುಖ್ಯಸ್ಥರು ದೇವಸ್ಥಾನಕ್ಕೆ ರಾತ್ರಿಯೇ ದೌಡಾಯಿಸಿ ಮಾಹಿತಿ ಕಲೆ ಹಾಕಿ, ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲನೆ ನಡೆಸಿದ್ದಾರೆ. 
ಗೋವಿಂದರಾಜ ಸ್ವಾಮಿ ದೇವಾಲಯ 12 ನೇ ಶತಮಾನದ್ದಾಗಿದ್ದು, 1130 ರಲ್ಲಿ ರಾಮಾನುಜಾಚಾರ್ಯರು ಇಲ್ಲಿಗೆ ಭೇಟಿ ನೀಡಿದ್ದ ಉಲ್ಲೇಖವಿದೆ. 
SCROLL FOR NEXT