ದೇಶ

ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು 30 ಮಂದಿ ಸಾವು

Lingaraj Badiger
ಲಖನೌ: ಕಳ್ಳಬಟ್ಟಿ ಸಾರಾಯಿ ಸೇವಿಸಿ 30ಕ್ಕೂ ಹೆಚ್ಚು ಮಂದಿ ಮೃತಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಶರಣಪುರ ಮತ್ತು ಕುಶಿನಗರ ಜಿಲ್ಲೆಗಳಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು 16 ಮಂದಿ ಮೃತಪಟ್ಟಿದ್ದು, ಉತ್ತರಾಖಂಡದ ಹರಿದ್ವಾರದಲ್ಲಿ 14ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಮೌನಿ ಅಮವ್ಯಾಸೆ ಪ್ರಯುಕ್ತ ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಈ ಕಲಬೆರಕೆ ಮದ್ಯವನ್ನು ಸೇವಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. 
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ದಾರುಣ ಘಟನೆ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅಸ್ವಸ್ಥರಿಗೆ ತಕ್ಷಣವೇ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ಸೂಚಿಸಿದ್ದಾರೆ. ಅಲ್ಲದೆ ಸಂತ್ರಸ್ತರ ರಕ್ತ ಸಂಬಂಧಿಗಳಿಗೆ ತಲಾ 2 ಲಕ್ಷ ರುಪಾಯಿಗಳು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಸಂಬಂಧಿಗಳಿಗೆ ತಲಾ 50 ಸಾವಿರ ರುಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.
ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ಯೋಗಿ ಅವರು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ. 
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಬಕಾರಿ ಇನ್ ಸ್ಪೆಕ್ಟರ್ ಗಳನ್ನು, ಇಬ್ಬರು ಹೆಡ್ ಕಾನ್ ಸ್ಟೇಬಲ್ ಗಳನ್ನು ಹಾಗೂ ಇಬ್ಬರು ಕಾನ್ ಸ್ಟೇಬಲ್ ಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.
ಇನ್ನು ಹರಿದ್ವಾರದಲ್ಲಿ ಅಂತ್ಯಕ್ರಿಯೆ ಕಾರ್ಯಕ್ರಮವೊಂದಕ್ಕೆಂದು ತಯಾರಿಸಲಾಗಿದ್ದ ಕಳ್ಳಬಟ್ಟಿ ಕುಡಿದು ಈ ದುರಂತ ಸಂಭವಿಸಿದೆ ಎಂದು ಉತ್ತರಾಖಂಡ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಂಬಂಧ ಉತ್ತರಾಖಂಡ ಸರ್ಕಾರ, ಅಬಕಾರಿ ಇಲಾಖೆಯ 13 ಅಧಿಕಾರಿಗಳನ್ಮು  ಅಮಾನತು ಮಾಡಿದೆ.
SCROLL FOR NEXT