ದೇಶ

ಪ್ರಧಾನಿ ಕಚೇರಿ ಮೇಲೆ ಸಿಬಿಐ ದಾಳಿ ಮಾಡಿದರೆ ರಾಫೆಲ್ ಹಗರಣದ ಸಂಪೂರ್ಣ ಜಾತಕ ಹೊರಕ್ಕೆ; ಕೇಜ್ರಿವಾಲ್

Srinivasamurthy VN
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದರೆ ರಾಫೆಲ್ ಹಗರಣದ ಸಂಪೂರ್ಣ ಜಾತಕ ಹೊರಗೆ ಬೀಳುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಹಿಂದೂ ಪತ್ರಿಕೆಯಲ್ಲಿ ಪ್ರಕಟಣವಾಗಿರುವ ರಹಸ್ಯ ಕಾರ್ಯಾಚರಣೆ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್, ಸಿಬಿಐ ಸಂಸ್ಥೆ ಸ್ವತಂತ್ರವಾಗಿ ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಮುಂದಾಗಬೇಕು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮೇಲೆ ದಾಳಿ ಮಾಡಿ ಅಲ್ಲಿ ಸಿಗುವ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದರೆ ಆಗ ರಾಫೆಲ್ ಹಗರಣದ ಸಂಪೂರ್ಣ ವಿವರ ಹೊರ ಬೀಳುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ಪತ್ರಿಕೆಯಲ್ಲಿ ಬಂದಿರುವ ವರದಿ ತೀರಾ ಪ್ರಮುಖವಾಗಿದ್ದು, ರಾಫೆಲ್ ಹಗರಣದ ಕರಾಳ ಮುಖವನ್ನು ಬಯಲು ಮಾಡಿದೆ. ಹೀಗಾಗಿ ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. 
ಇದೇ ವೇಳೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ದೆಹಲಿಯ ನಾರ್ಥ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಪತ್ರಿಕೆಯಲ್ಲಿ ವರದಿಗಳನ್ನೇ ಸಾಕ್ಷಿಯಾಗಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
SCROLL FOR NEXT