ದೇಶ

ಕಾಶ್ಮೀರ ಹಿಮಪಾತದಲ್ಲಿ ಸಿಲುಕಿದ ಗರ್ಭಿಣಿ: ಕಾಲ್ನಡಿಗೆಯಲ್ಲೇ 2.5 ಕಿಮೀ ಹೊತ್ತು ಆಸ್ಪತ್ರೆಗೆ ಸೇರಿಸಿದ ಸೇನೆ!

Srinivas Rao BV
ಕಾಶ್ಮೀರದ ಹಿಮಪಾತದಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಸೇನೆ ನೆರವಿಗೆ ಧಾವಿಸಿದ್ದು ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 
ಬಂಡಿಪೋರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸೇನೆಯ ಸಮಯೋಚಿತ ನೆರವಿನಿಂದ ಗರ್ಭಿಣಿ ಮಹಿಳೆಯನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿದೆ.  ಪನಾರ್ ಆರ್ಮಿ ಕ್ಯಾಂಪ್ ನ ಕಂಪನಿ ಕಮಾಂಡರ್ ಗೆ ಗ್ರಾಮಸ್ಥನೋರ್ವ ತನ್ನ ಗರ್ಭಿಣಿ ಪತ್ನಿ ಗುಲ್ಶನ್ ಬೇಗಮ್ ನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಕೋರಿ ಕರೆ ಮಾಡಿದ್ದ. ಹಿಮಪಾತ ತೀವ್ರವಾಗಿದ್ದಿದ್ದರಿಂದ ರಸ್ತೆ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಕಷ್ಟ ಎದುರಿಸುತ್ತಿದ್ದ ವ್ಯಕ್ತಿಗೆ ಸೇನೆ ನೆರವು ನೀಡಲು ಧಾವಿಸಿತು.
ರಸ್ತೆ ಬಂದ್ ಆಗಿದ್ದರೂ ಸಹ ತಮ್ಮ ಕಷ್ಟವನ್ನು ಲೆಕ್ಕಿಸದೇ ನೆರವಿಗೆ ಧಾವಿಸಿದ ಬಂಡಿಪೋರ್ ನ ರಾಷ್ಟ್ರೀಯ ರೈಫಲ್ಸ್ ನ ತಂಡ ಗ್ರಾಮಸ್ಥನ ನಿವಾಸಕ್ಕೇ ತೆರಳಿದ್ದು, ಕಾಲ್ನಡಿಗೆಯಲ್ಲೇ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಮುಂದಕ್ಕೆ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತುರ್ತಿನ ಮಹತ್ವವನ್ನು ಅರಿತಿದ್ದ ಸೇನೆ ತಮಗೆ ಕರೆ ಬಂದ ತಕ್ಷಣವೇ ಎಚ್ಚೆತ್ತು ಆಸ್ಪತ್ರೆ ಹಾಗೂ ವೈದ್ಯರಿಗೆ ಮಾಹಿತಿ ಮುಟ್ಟಿಸಿ ಸಿದ್ಧವಿರುವಂತೆ ಮನವಿ ಮಾಡಿತ್ತು. ಬಂಡಿಪೋರ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದಂತೆಯೇ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಅಗತ್ಯವಿದ್ದ ಹಿನ್ನೆಲೆಯಲ್ಲಿ ಶ್ರೀನಗರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೇನೆಯ ಸಮಯೋಚಿತ ನೆರವಿನಿಂದ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
SCROLL FOR NEXT