ದೇಶ

ಇಮ್ರಾನ್ ಖಾನ್ ಬಗ್ಗೆ ಫಾರೂಖ್ ಅಬ್ದುಲ್ಲಾ ಮೆಚ್ಚುಗೆ, ಬಿಜೆಪಿ ಸರ್ಕಾರದ ವಿರುದ್ಧ ಟೀಕೆ!

Lingaraj Badiger
ನವದೆಹಲಿ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನಂತರ ನ್ಯಾಷನಲ್ ಕಾನ್ಫರೆನ್ಸ್  ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ದೇಶದ ಅಭಿವೃದ್ಧಿ ಎಂದರೆ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಯಾಗಬೇಕು. ಕೇವಲ ಒಂದು ವರ್ಗದ ಅಭಿವೃದ್ಧಿಯಲ್ಲ ಎಂಬ ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಅಬ್ದುಲ್ಲಾ ಹೇಳಿದ್ದಾರೆ.
ದುಬೈ ಸಮ್ಮೇಳನದಲ್ಲಿ ಇಮ್ರಾನ್ ಖಾನ್ ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಫಾರೂಖ್ ಅಬ್ದುಲ್ಲಾ ಅವರು, 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಬಿಜೆಪಿ ತಾನು ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಭಾರತದ ಪ್ರತಿ ಹಳ್ಳಿಗೂ ವಿದ್ಯುತ್ ಸೌಲಭ್ಯ ನೀಡಿದ್ದೇವೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಆದರೆ ನನ್ನ ರಾಜ್ಯಕ್ಕೆ ಬನ್ನಿ. ಹಳ್ಳಿ ಬಿಡಿ, ಪ್ರಮುಖ ನಗರಗಳಲ್ಲೇ ಈಗಲೂ ವಿದ್ಯುತ್ ಸೌಲಭ್ಯ ಇಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಹೇಳಿದ್ದಾರೆ.
ನಿನ್ನೆ ಕರ್ತಾರ್‌ಪುರ್‌ ಕಾರಿಡಾರ್‌ ವಿಷಯದಲ್ಲಿ ಸದ್ಭಾವನೆ ತೋರಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತಪಡಿಸಿದ ಮೆಹಬೂಬ ಮೂಫ್ತಿ, ಪಾಕಿಸ್ಥಾನದಲ್ಲಿ ಅಲ್ಲಿನ ಸರ್ಕಾರ ಹಿಂದೂ ದೇವಾಲಯಗಳನ್ನು ರಕ್ಷಿಸುವ ಕಾಯಿದೆಯನ್ನು ರೂಪಿಸಿದೆ. ಹಾಗೆಯೇ ಒಂದು ಮೀಸಲು ಅರಣ್ಯಕ್ಕೆ ಮತ್ತು ವಿವಿಗೆ ಗುರು ನಾನಕ್‌ ಜೀ ಅವರ ಹೆಸರನ್ನು ಇರಿಸಿದ್ದಾರೆ ಎಂದು ಹೇಳಿದ್ದರು.
SCROLL FOR NEXT