ದೇಶ

ಲೋಕಸಭೆಯಲ್ಲಿ ಆಪರೇಷನ್ ಕಮಲ ಪ್ರತಿಧ್ವನಿ: ಕಾಂಗ್ರೆಸ್ ನಿಂದ ಸ್ವಲ್ಪಕಾಲ ಸಭಾತ್ಯಾಗ

Nagaraja AB

ನವದೆಹಲಿ: ಕರ್ನಾಟಕದ ರಾಜಕೀಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಆಪರೇಷನ್ ಕಮಲದ ವಿಚಾರ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿತು.

ಆಡಿಯೋ ಟೇಪ್ ವಿಚಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು ಆಡಳಿತಾರೂಢ ಸಮ್ಮಿಶ್ರದ ಸರ್ಕಾರದ ಶಾಸಕರನ್ನು ಖರೀದಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ, ಈ ಆರೋಪವನ್ನು ಕೇಂದ್ರ ಸಚಿವ ಸದಾನಂದಗೌಡ ನಿರಾಕರಿಸಿದರು.

 ಈ ವಿಚಾರದಿಂದಾಗಿ  ಸೋನಿಯಾಗಾಂಧಿ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸ್ವಲ್ಪ ಕಾಲ ಸಭಾತ್ಯಾಗ ನಡೆಸಿದರು. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಸದನಕ್ಕೆ ಆಗಮಿಸಿದರು.

ಶೂನ್ಯ ವೇಳೆಯಲ್ಲಿ ಬಿಎಸ್ ಯಡಿಯೂರಪ್ಪ ಅವರ ಆಡಿಯೋ ಕ್ಲಿಪ್  ಬಗ್ಗೆ ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರೇ ಕುದುರೆ ವ್ಯಾಪಾರಕ್ಕಿಳಿದಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಆಡಿಯೋ ಟೇಪ್ ನಲ್ಲಿ  ರಾಜ್ಯದಲ್ಲಿನ ಸ್ಪೀಕರ್ ಹಾಗೂ ಜಡ್ಜ್ ಅವರನ್ನು ನಿರ್ವಹಿಸುವುದಾಗಿ ಹೇಳಿರುವ ಅಂಶವಿದೆ ಎಂದು ಹೇಳಿದರು. ಖರ್ಗೆ ಅವರ ಹೇಳಿಕೆಗೆ ಸಚಿವ ಸದಾನಂದಗೌಡ ಆಕ್ಷೇಪ ವ್ಯಕ್ತಪಡಿಸಿದರು.ಈ ರೀತಿಯ ಆಪರೇಷನ್ ಕಮಲ ದೇಶದಲ್ಲಿ ನಡೆಯಬಾರದು ಎಂದು ಹೇಳಿದರು.

ಆದರೆ, ಇವರ ಹೇಳಿಕೆಯನ್ನು ನಿರಾಕರಿಸಿದ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದಗೌಡ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಈಗಾಗಲೇ ಆಂತರಿಕ ಜಗಳ ಆರಂಭವಾಗಿದ್ದು, ಉಭಯ ಪಕ್ಷಗಳು ನಕಲಿ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸ್ಥಾನವನ್ನು ಉಳಿಸಲು ಉಭಯ ಪಕ್ಷಗಳು ಈ ರೀತಿ ಮಾಡುತ್ತಿವೆ. ಕಾಂಗ್ರೆಸ್ ಮಾಡಿದ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು, ಸುಳ್ಳಿನಿಂದ ಕೂಡಿವೆ ಎಂದು ಹೇಳಿದರು.
ಆಪರೇಷನ್ ಕಮಲ, ಪ್ರಜಾಪ್ರಭುತ್ದದ ಹತ್ಯೆ ಮತ್ತಿತರ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯರು ಕೆಲಕಾಲ ಕಲಾಪಕ್ಕೆಅಡ್ಡಿಪಡಿಸಿದರು. ಆಂಧ್ರಪ್ರದೇಶದಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಟಿಡಿಪಿ ಸದಸ್ಯರು  ಘೋಷಣೆ ಕೂಗಿದರು.
SCROLL FOR NEXT