ದೇಶ

ಅಲಹಾಬಾದ್ ವಿವಿಗೆ ಅಖಿಲೇಶ್ ಹೋಗುವುದರಿಂದ ಹಿಂಸಾಚಾರ ಸಂಭವಿಸಬಹುದು: ಸಿಎಂ ಯೋಗಿ ಆದಿತ್ಯಾನಾಥ್

Srinivasamurthy VN
ಲಖನೌ: ಅಲಹಾಬಾದ್ ವಿಶ್ವವಿದ್ಯಾಲಯಕ್ಕೆ ಅಖಿಲೇಶ್ ತೆರಳುವುದರಿಂದ ಅಲ್ಲಿ ಹಿಂಸಾಚಾರ ಸಂಭವಿಸಬಹುದು, ಇದೇ ಕಾರಣಕ್ಕೆ ಅವರನ್ನು ತಡೆಯಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಮುಖಂಡನ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಸಮಾಜವಾದಿ ಮುಖಂಡ ಅಖಿಲೇಶ್ ಯಾದವ್ ತೆರಳಿಚ್ಛಿಸಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದರು. ಈ ವಿಚಾರ ಇದೀಗ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ಆದಿತ್ಯಾನಾಥ್ ಅವರು, 'ಸಾಮಾಜವಾದಿ ಪಕ್ಷ ಹಿಂಸಾಚಾರ ಸೃಷ್ಟಿಯಿಂದಲೇ ಕುಖ್ಯಾತಿ ಗಳಿಸಿದೆ. ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ರೀತಿಯ ಚಟುವಟಿಗಳನ್ನು ತಾವು ಸಹಿಸುವುದಿಲ್ಲ. ಈ ಕುರಿತು ಎಸ್ ಪಿ ಪಕ್ಷ ಕೊಂಚ ಜಾಗರೂಕತೆಯಿಂದರಬೇಕು, ಪ್ರಯಾಗ್ ರಾಜ್ ನಲ್ಲಿ ಕುಂಭ ಮೇಳ ನಡೆಯುತ್ತಿದ್ದು, ಸಮಾಜ ವಿದ್ರೋಹಿ ಚಟುವಟಿಕೆಗಳಿಗೆ ನಾವು ಆಸ್ಪದ ನೀಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ 10 ದಿನಗಳ ಹಿಂದಷ್ಟೇ ಅಖಿಲೇಶ್ ಯಾದವ್ ಅವರೇ ಕುಂಭಮೇಳಕ್ಕೆ ತೆರಳಿ ಸ್ನಾನ ಮಾಡಿ ಪೂಜೆ ಸಲ್ಲಿಸಿದ್ದಾರೆ. ಅವರ ಭೇಟಿ ಹಿಂದಿನ ಮರ್ಮವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಇಂತಹ ತಂತ್ರಗಾರಿಕೆ ಸರಿಯಲ್ಲ ಎಂದು ಯೋಗಿ ಆದಿತ್ಯಾನಾಥ್ ಹೇಳಿದರು.  
ಇನ್ನು ಅಲಹಾಬಾದ್​ ವಿಶ್ವವಿದ್ಯಾಲಯದ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಘಟಕವು, ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಇಂದು ನಿಗದಿ ಮಾಡಿತ್ತು. ಸಮಾರಂಭಕ್ಕೆ ಅಖಿಲೇಶ್​ ಯಾದವ್​ ಅವರನ್ನು ಆಹ್ವಾನಿಸಿತ್ತು. ಹೀಗಾಗಿ ಅಖಿಲೇಶ್​ ಇಂದು ಅಲಹಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ವಿವಿಗೆ ತೆರಳಲೆಂದು ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಅಲ್ಲದೆ, ಸಮವಸ್ತ್ರವಿಲ್ಲದ ಪೊಲೀಸ್​ ಅಧಿಕಾರಿಯೊಬ್ಬರು ಕೈ ಅಡ್ಡವಿಟ್ಟು ಅಖಿಲೇಶ್​ರನ್ನು ತಡೆದಿದ್ದಾರೆ. ಜತೆಗೇ, ವಿಶೇಷ ವಿಮಾನವೇರಲು ಅಖಿಲೇಶ್​ ಪ್ರಯತ್ನಿಸಿದಾಗ ವಿಮಾನದ ಮೆಟ್ಟಿಲುಗಳಿಗೆ ಅಡ್ಡಲಾಗಿ ನಿಂತು ಪ್ರತಿರೋಧ ತೋರಿದ್ದಾರೆ. ಈ ಇಡೀ ಸನ್ನಿವೇಶದ ವಿಡಿಯೊ ಮತ್ತು ಚಿತ್ರಗಳನ್ನು ಅಖಿಲೇಶ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಖಿಲೇಶ್​ ಯಾದವ್​, 'ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ವಿಚಾರದಲ್ಲಿ ಸರ್ಕಾರ ಭಯಭೀತಿಗೊಂಡಿದೆ. ಅದಕ್ಕಾಗಿಯೇ ನನ್ನನ್ನು ಏರ್ ಪೋರ್ಟ್ ನಲ್ಲಿ ತಡೆಯಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪೊಲೀಸರು ತಡೆದ ಹಿನ್ನೆಲೆಯಲ್ಲಿ ಅಖಿಲೇಶ್​ ಯಾದವ್​ ಏರ್​ಪೋರ್ಟ್​ನಿಂದ ಹೊರ ನಡೆದರು. ಇದಕ್ಕೂ ಹಿಂದೆ ಅಲಹಾಬಾದ್​ ವಿಶ್ವವಿದ್ಯಾಲಯವು ಅಖಿಲೇಶ್​ ಯಾದವ್​ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಬರೆದಿದ್ದು, ರಾಜಕಾರಣಿಗಳಿಗೆ ವಿವಿಯ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕಾಲೇಜು ಪದಾಧಿಕಾರಿಗಳು ಅಖಿಲೇಶ್ ಯಾದವ್ ಅವರನ್ನು ಕಾಲೇಜಿನ ಆವರಣದ ಹೊರಗೆ ನಡೆಯುವ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತೇವೆ ಎಂದು ಹೇಳಿತ್ತು. 
ಇನ್ನು ಇಂದಿನ ಘಟನೆ ಕುರಿತು ಮಾತನಾಡಿರುವ ಉತ್ತರ ಪ್ರದೇಶ ಪೊಲೀಸರು, 'ಕಾನೂನು ಸುವ್ಯವಸ್ಥೆಗೆ ಭಂಗ ಬರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಅಖಿಲೇಶ್​ ಯಾದವ್​ ಅವರ ಕ್ಯಾಂಪಸ್​ ಪ್ರವೇಶ ನಿರಾಕರಿಸಿತ್ತು. ಕಾನೂನು ಸುವ್ಯವಸ್ಥೆ ಪಾಲನೆ ಮಾಡುವುದು ಪೊಲೀಸರ ಕರ್ತವ್ಯ. ನಾವು ಅದನ್ನು ನಿರ್ವಹಿಸಿದ್ದೇವೆ' ಎಂದು ಹೇಳಿದ್ದಾರೆ. 
SCROLL FOR NEXT