ದೇಶ

ದೆಹಲಿ ವರ್ಸಸ್ ಕೇಂದ್ರ: ಸುಪ್ರೀಂ ಆದೇಶ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದ ಸಿಎಂ ಕೇಜ್ರಿವಾಲ್

Srinivasamurthy VN
ನವದೆಹಲಿ: ದೆಹಲಿ ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚಿನ ಅಧಿಕಾರವಿದೆ ಎಂಬ ಸುಪ್ರೀಂ ಕೋರ್ಟ್ ಆದೇಶ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ನಡುವಿನ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನ ದ್ವಿ ಸದಸ್ಯ ಪೀಠ, ಸರ್ಕಾರಕ್ಕಿಂತಲೂ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರವಿದೆ ಎಂದು ತೀರ್ಪು ನೀಡಿತ್ತು. 
ತೀರ್ಪು ಪ್ರಕಟಣೆಯಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಸುಪ್ರೀಂ ಕೋರ್ಟ್ ಆದೇಶ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಹೇಳಿದರು. ಅಲ್ಲದೆ ತೀರ್ಪಿನ ಸಂಬಂಧ ತಾವು ಕೂಡಲೇ ಕಾನೂನು ತಜ್ಞರ ಭೇಟಿ ಮಾಡಿ ಸಲಹೆ ಪಡೆಯುತ್ತೇನೆ ಎಂದು ತಿಳಿಸಿದರು. 
ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ದೆಹಲಿ ಜನತೆಗೆ ಅನ್ಯಾಯವಾಗಿದ್ದು, ಕೋರ್ಟ್ ತೀರ್ಪು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಹೀಗಾಗಿ ತಾವು ಕಾನೂನು ತಜ್ಞರ ಸಲಹೆ ಕೇಳಿ, ಅದರ ಮೇರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾ ಎ.ಕೆ. ಸಿಕ್ರಿ ಮತ್ತು ನ್ಯಾ ಅಶೋಕ್ ಭೂಷಣ್ ಅವರ ನೇತೃತ್ವದ ದ್ವಿಸದಸ್ಯ ಪೀಠ, ದೆಹಲಿ ಆಡಳಿತದಲ್ಲಿ ಅಲ್ಲಿಯ ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ ತನಿಖೆಗಳ ಅಧಿಕಾರವು ದೆಹಲಿ ಲೆಫ್ಟಿನೆಂಟ್ ರಾಜ್ಯಪಾಲರ ಕೈಯಲ್ಲೇ ಇರಲಿದೆ. ಹಾಗೆಯೇ, ಕೇಜ್ರಿವಾಲ್ ಸರ್ಕಾರ ಬಲವಾಗಿ ಒತ್ತಾಯಿಸುತ್ತಿರುವ ಪೊಲೀಸ್ ಇಲಾಖೆಯ ನಿಯಂತ್ರಣ ಕೂಡ ಎಲ್​ಜಿ ಅವರ ಬಳಿಯೇ ಇರಲಿದೆ. ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರವೂ ಎಲ್​ಜಿ ಅವರ ಬಳಿಯೇ ಇರಬೇಕು ಎಂದು ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
SCROLL FOR NEXT