ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಉಗ್ರ ದಾಳಿಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಯೋಧರ ತ್ಯಾಗ ಬಲಿದಾನಗಳು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. "ಸಿಆರ್ ಪಿಎಫ್ ಯೋಧರ ಮೇಲೆ ನಡೆದ ದಾಳಿಯನ್ನು ಖಂಡಿಸುತ್ತೇನೆ. ನಮ್ಮ ವೀರ ಯೋಧರ ತ್ಯಾಗ ಬಲಿದಾನಗಳು ವ್ಯರ್ಥವಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಇಡೀ ದೇಶ ಹೆಗಲು ನೀಡುತ್ತದೆ, ಗಾಯಗೊಂಡ ಯೋಧರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದೇ ವೇಳೆ ಮತ್ತೊಂದು ಟ್ವೀಟ್ ನಲ್ಲಿ ಘಟನೆ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಂದ ಮಾಹಿತಿ ಪಡೆಯುತ್ತಿರುವುದಾಗಿ ಮೋದಿ ತಿಳಿಸಿದ್ದಾರೆ.
ಉಗ್ರರ ಅಟ್ಟಹಾಸಕ್ಕೆ ಸೇನೆ ಎದೆಗುಂದದು: ಜಮ್ಮು ಕಾಶ್ಮೀರ ರಾಜ್ಯಪಾಲ
ಇನ್ನು ಯೋಧರ ಮೇಲಿನ ಉಗ್ರರ ದಾಳಿಯನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಖಂಡಿಸಿದ್ದು, ಇಂತಹ ಅಟ್ಟಹಾಸಕ್ಕೆ ಭಾರತೀಯ ಸೇನೆ ಎದೆಗುಂದುವುದಿಲ್ಲ ಎಂದು ಹೇಳಿದ್ದಾರೆ.ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಅವರು, ಆಸ್ಪತ್ರೆಗೆ ದಾಖಲಾಗಿರುವ ಸೈನಿಕರ ಚೇತರಿಕೆಗೆ ಹಾರೈಸಿದ್ದಾರೆ.
ಉಗ್ರರ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಪಾಲರು, ಜೈಷೆ ಮೊಹಮದ್ ಸಂಘಟನೆಯ ಪೈಶಾಚಿಕ ಕೃತ್ಯಕ್ಕೆ ಗಡಿಯಂಚಿನ ಮಾರ್ಗದರ್ಶನ ದೊರಕಿರಬಹುದು. ಇಂತಹ ನಿರಂಕುಶ ಶಕ್ತಿಗಳಿಗೆ ತಕ್ಕ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರದೆಲ್ಲಡೆ ಹದ್ದಿನ ಕಣ್ಣಿಡುವಂತೆ ಭದ್ರತಾ ಪಡೆಗಳಿಗೆ ಸೂಚಿಸಿರುವ ರಾಜ್ಯಪಾಲರು, ಪ್ರತಿಯೊಂದು ಅಂಶಗಳ ಬಗ್ಗೆ ಜಿಲ್ಲಾ ವಿಭಾಗೀಯ ನಾಗರಿಕ ಹಾಗೂ ಪೊಲೀಸ್ ಆಡಳಿತಕ್ಕೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ.