ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಆಶಿಸುವುದಾಗಿ ಲೋಕಸಭೆಯಲ್ಲಿ ಹೇಳಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹಾಗೂ ಕೆಲವು ಸಚಿವರು ಗುರುವಾರ ಧನ್ಯವಾದ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ಮುನ್ನ, ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಆಶಿಸಿದ ಮುಲಾಯಂ ಸಿಂಗ್ ಯಾದವ್ ಜಿ ಅವರಿಗೆ ನಾನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ ಎಂದು ಮೌರ್ಯ ಹೇಳಿದರು.
ನಂತರ ಮುಲಾಯಂ ಅವರಿಗೆ ಧನ್ಯವಾದ ಹೇಳಿದ ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಅವರು, ಮುಲಾಯಂ ಸಿಂಗ್ ಯಾದವ್ ಅವರ ಹೇಳಿಕೆ ದೇಶದ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ನಾನು ಹಾರೈಸುತ್ತೇನೆ ಎಂದು ಮುಲಾಯಂ ಸಿಂಗ್ ಯಾದವ್ ಅವರು ಬುಧವಾರ ಲೋಕಸಭೆಯಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನರೇಂದ್ರ ಮೋದಿ ಅವರು ಮುಂದಿನ ಚುನಾವಣೆಗಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ಮುಲಾಯಂ ಸಿಂಗ್ ಅವರು ನನಗೆ ಆಶೀರ್ವಾದ ನೀಡಿದ್ದಾರೆ. ನಾನು ಅವರಿಗೆ ಆಭಾರಿಯಾಗಿರುತ್ತೇನೆ ಎಂದು ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics