ದೇಶ

ಆದಿಲ್ ಅಹ್ಮದ್ ದಾರ್: ಧೋನಿಯ ಕಟ್ಟಾ ಅಭಿಮಾನಿ ಆತ್ಮಾಹುತಿ ಬಾಂಬರ್ ಆಗಿ ಬದಲಾಗಿದ್ದೇಗೆ?

Vishwanath S
ನವದೆಹಲಿ: ಮೈದಾನದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಹೆಲಿಕ್ಟಾಫರ್ ಶಾಟ್ ಮೂಲಕ ಚೆಂಡನ್ನು ಸಿಕ್ಸರ್ ಬಾರಿಸುತ್ತಿದ್ದರೆ ಇತ್ತ ದಕ್ಷಿಣ ಕಾಶ್ಮೀರದ ಬಾಲಕ ಆದಿಲ್ ಕುಣಿದು ಕುಪ್ಪಳಿಸುತ್ತಿದ್ದ. ಒಂದು ವೇಳೆ ಪಂದ್ಯವನ್ನು ಟೀಂ ಇಂಡಿಯಾ ಸೋತರೆ ಅಂದು ಯಾರ ಜೊತೆಗೂ ಮಾತನಾಡದೆ ಮೌನಿಯಾಗುತ್ತಿದ್ದ ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
22 ವರ್ಷದ ದಾರ್ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. 2017ರಲ್ಲಿ ಧಾರ್ಮಿಕ ಶಿಕ್ಷಣ ಕೋರ್ಸ್ ಗೆ ಸೇರಿಕೊಂಡಿದ್ದ. ಆದರೆ, 2018ರ ಮಾರ್ಚ್ ನಲ್ಲಿ ಇದ್ದಕ್ಕಿದ್ದಂತೆ ಕಾಣೆಯಾದ. ಬಳಿಕ ಇದೀಗ 2019ರ ಫೆಬ್ರವರಿ 14ರಂದು ಭೀಕರ ದಾಳಿ ನಡೆಸುವ ಮೂಲಕ ಉಗ್ರ ಸಂಘಟನೆ ಸೇರಿರುವುದು ಜಗಜ್ಜಾಹೀರ್ ಆಗಿದೆ.
2016ರಲ್ಲಿ ಕಾಕಾಪೋರದಲ್ಲಿ ನಡೆದ ಕಲ್ಲು ತೂರಾಟದ ಸಂದರ್ಭದಲ್ಲಿ ನನ್ನ ಮಗ ಮನೆಗೆ ಮರಳುವಾಗ ಭದ್ರತಾ ಪಡೆ ಯೋಧರು ಆತನಿಗೆ ಕಿರುಕುಳ ನೀಡಿದ್ದರು ಎಂದು ಆದಿಲ್ ತಂದೆ ಗುಲಾಮ್ ಹಸನ್ ಹೇಳಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಕಾರ್ಯಾಚರಣಾ ತಂಡ(ಎಸ್ಒಜಿ) ಸಿಬ್ಬಂದಿಗಳು ಆದಿಲ್ ನನ್ನ ಬಂಧಿಸಿ ಚಿತ್ರಹಿಂಸೆ ನೀಡಿದ್ದರು ಇದರಿಂದಾಗಿಯೇ ನನ್ನ ಮಗ ಇಂತಹ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಆದಿಲ್ ತಂದೆ ಹೇಳಿರುವುದಾಗಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
SCROLL FOR NEXT