ದೇಶ

ಪುಲ್ವಾಮಾ ಉಗ್ರರ ದಾಳಿಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ; ಸೀತಾರಾಮ್ ಯೆಚೂರಿ

Sumana Upadhyaya

ಹೈದರಾಬಾದ್: ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.

ಚುನಾವಣೆಗಾಗಿ ಭಯೋತ್ಪಾದಕ ದಾಳಿಯನ್ನು ಬಳಸಿಕೊಳ್ಳುತ್ತಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ತಪ್ಪು ಎಂದು ಹೇಳಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಗೆ ಮಾತನಾಡಿದ ಅವರು, ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ಉಗ್ರರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ, ಏಕೆಂದರೆ ನಾವು ಯುಪಿಎ ಸರ್ಕಾರವಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಗಳು ಪ್ರಶ್ನೆ ಹುಟ್ಟುಹಾಕುತ್ತವೆ. ಯಾವುದೇ ವಿಚಾರದಲ್ಲಿ ನಿಖರತೆ ಇರಬೇಕು. ಬಿಜೆಪಿ ಸರ್ಕಾರವೇ ಕಳೆದ 5 ವರ್ಷಗಳಿಂದ ಇದೆ, ಹಾಗಾದರೆ ಈ ಘಟನೆ ಹೇಗೆ ನಡೆಯಿತು.ಬಿಜೆಪಿಯವರು ಇದನ್ನು ರಾಜಕೀಯಗೊಳಿಸುತ್ತಿದ್ದು ಇದು ದೇಶಕ್ಕೆ ಮಾರಕ ಎಂದು ಆರೋಪಿಸಿದರು.

ನಿನ್ನೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಸೌದಿ ಯುವರಾಜನನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದನ್ನು ಪ್ರಶ್ನಿಸಿದ ಸೀತಾರಾಮ ಯೆಚೂರಿ, ಪ್ರಧಾನಿಯವರು ಈ ಹಿಂದೆ ಈ ರೀತಿ ವರ್ತಿಸಲಿಲ್ಲ. ಈ ಹಿಂದೆ ಹಲವು ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಭಾರತಕ್ಕೆ ಬಂದಿದ್ದಾಗ ಪ್ರಧಾನಿ ಮೋದಿಯವರು ಈ ರೀತಿ ಬರಮಾಡಿಕೊಂಡಿರಲಿಲ್ಲ. ಸೌದಿಯ ಯುವರಾಜರನ್ನು ಏಕೆ ಆ ರೀತಿ ಸ್ವೀಕರಿಸಿದರು ಎಂದು ಪ್ರಧಾನಿಯವರೇ ಉತ್ತರಿಸಬೇಕು. ಭಾರತಕ್ಕೆ ಬರುವ ಮೊದಲು ಸೌದಿ ಯುವರಾಜ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಗೆ ನೆರವನ್ನು ನೀಡಿದ್ದರು. ಇಬ್ಭಗೆ ನೀತಿ ಹೊಂದಿರುವವರನ್ನು ಒಪ್ಪಲು ಸಾಧ್ಯವೇ ಎಂದು ಕೇಳಿದರು.

SCROLL FOR NEXT