ನವದೆಹಲಿ: 57 ಸದ್ಯಸರನ್ನು ಹೊಂದಿರುವ ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ವಿದೇಶಾಂಗ ಸಚಿವರುಗಳೊಂದಿಗಿನ ಸಭೆಯಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ಸಚಿವರಿಗೆ ಗೌರವ ಅತಿಥಿಯಾಗಿ ಭಾಗವಹಿಸಲು ಆಹ್ವಾನ ನೀಡಿದೆ.
ಮಾ.1 ರಂದು ಅಬುಧಾಬಿಯಲ್ಲಿ ನಡೆಯಲಿರುವ ಒಐಸಿಯ 46 ನೇ ಸೆಷನ್ ಉದ್ಘಾಟನಾ ಭಾಷಣ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಯೀದ್ ಅಲ್ ನಹ್ಯಾನ್ ಆಹ್ವಾನ ನೀಡಿದ್ದಾರೆ.
ಯುಎಇಯ ಆಹ್ವಾನಕ್ಕೆ ಧನ್ಯವಾದ ತಿಳಿಸುತ್ತೇವೆ, ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ-ಆಪರೇಷನ್ ನ ಆಹ್ವಾನವನ್ನು ಭಾರತದಲ್ಲಿರುವ 185 ಮಿಲಿಯನ್ ಮುಸ್ಲಿಮರ ಹಾಗೂ ಇಸ್ಲಾಮಿಕ್ ಜಗತ್ತಿಗೆ ಭಾರತದ ಕೊಡುಗೆಯ ಸ್ವಾಗತಾರ್ಹ ಗುರುತಿಸುವಿಕೆಯೆಂದು ಪರಿಗಣಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
1969 ರಲ್ಲಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ 57 ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯಾಗಿದೆ.