ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್
ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ವಿಧಿ 370 ರದ್ದುಗೊಂಡರೆ ಭಾರತ-ಕಾಶ್ಮೀರ ಸಂಬಂಧವೂ ಸಹ ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಎಚ್ಚರಿಸಿದ್ದಾರೆ.
ಆರ್ಟಿಕಲ್ 370 ಹಾಗೂ 35ಎ ರ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್ ಈ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ಕೇಂದ್ರ ಸರ್ಕಾರ ಆರ್ಟಿಕಲ್ 370 ಹಾಗೂ 35A ನ್ನು ರದ್ದುಗೊಳಿಸಿದ್ದೇ ಆದಲ್ಲಿ ನಾನು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರು, ಮಾಜಿ ಮುಖ್ಯಮಂತ್ರಿ ಮೆಹೆಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಓಮರ್ ಅಬ್ದುಲ್ಲಾ ಅವರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತೇನೆ ಎಂದು ಸೈಫುದ್ದೀನ್ ಸೋಜ್ ತಿಳಿಸಿದ್ದಾರೆ.
ಯಾವ ಕಾರಣಕ್ಕಾಗಿ ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ. ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಿರುವುದರಿಂದ ಸ್ಥಳೀಯರು ಭಯಗೊಂಡಿದ್ದಾರೆ. ಆರ್ ಎಸ್ಎಸ್ ನವರು ಈಗಾಗಲೇ ದೇಶಕ್ಕೆ ಸಾಕಷ್ಟು ಹಾನಿ ಮಾಡಿದ್ದಾರೆ, ಈಗಲೂ ಆರ್ಟಿಕಲ್ 370 ರ ಕುರಿತು ಆರ್ ಎಸ್ಎಸ್ ನವರೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವೇಳೆ ಆರ್ಟಿಕಲ್ 370 ರದ್ದುಗೊಂಡರೆ ಭಾರತ-ಕಾಶ್ಮೀರ ಸಂಬಂಧ ಮುಗಿದಂತೆಯೇ.
ಹುರಿಯತ್ ಹಾಗೂ ಮುಖ್ಯವಾಹಿನಿಯಲ್ಲಿರುವವರು ಕಾಶ್ಮೀರ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಸಿದ್ಧವಿದ್ದರು. ಆದರೆ ಸರ್ಕಾರ ಏನಾದರೂ ಮಾತುಕತೆಗೆ ಮುಂದಾಯಿತೇ? ಕಾಶ್ಮೀರ ವಿಷಯದಲ್ಲಿ ಕೇಂದ್ರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ನಮ್ಮ ಹಾಗೂ ನಮ್ಮ ಮಕ್ಕಳ ಜೀವನ ನಿರ್ಧಾರವಾಗಲಿದೆ ಎಂದು ಸೋಜ್ ಹೇಳಿದ್ದಾರೆ.
ಇದೇ ವೇಳೆ ಪುಲ್ವಾಮ ದಾಳಿಯ ಬಗ್ಗೆಯೂ ಮಾತನಾಡಿರುವ ಅವರು ಸ್ಥಳೀಯ ಯುವಕ ಮಾಡಿದ್ದು ತಪ್ಪು, ಆದರೆ ಆತ ಭಯೋತ್ಪಾದಕನಾಗಲು ಸೇನೆಯೇ ಕಾರಣ ಎಂದು ಆರೋಪಿಸಿದ್ದಾರೆ.