ದೇಶ

ಅತ್ತ ಪಿಒಕೆಯಲ್ಲಿ ವಾಯುಸೇನೆ ದಾಳಿ, ಇತ್ತ ಪ್ರತ್ಯೇಕತಾವಾದಿಗಳ ಮನೆಯಲ್ಲಿ ಎನ್ಐಎ ದಾಳಿ!

Srinivasamurthy VN
ಶ್ರೀನಗರ: ಅತ್ತ ಭಾರತೀಯ ವಾಯುಸೇನೆ ಇಂದು ಮುಂಜಾನೆ ಪಿಒಕೆಯಲ್ಲಿ ದಾಳಿ ಮಾಡಿ ಉಗ್ರನೆಲೆಗಳನ್ನು ಧ್ವಂಸ ಮಾಡಿ ವಾಪಾಸ್ ಆದ ಬೆನ್ನಲ್ಲೇ ಇತ್ತ ಶ್ರೀನಗರದಲ್ಲಿ ಎನ್ಐಎ ಅಧಿಕಾರಿಗಳು ಪ್ರತ್ಯೇಕತಾವಾದಿಗಳ ಮೇನೆ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ.
ಹೌದು.. ಇಂದು ಮುಂಜಾನೆ ಪಾಕಿಸ್ತಾನಕ್ಕೆ ಮಾತ್ರವಲ್ಲ ಎನ್ಐಎ ಮೂಲಕ ಕೇಂದ್ರ ಸರ್ಕಾರ ಪ್ರತ್ಯೇಕತಾವಾದಿಗಳಿಗೂ ಶಾಕ್ ನೀಡಿದ್ದು, ಬೆಳ್ಳಂಬೆಳಗ್ಗೆಯೇ ಪ್ರತ್ಯೇಕತಾವಾದಿಗಳ ಮನೆ ಮತ್ತು ಕಚೇರಿಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಗಿನ ಜಾವ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಶ್ರೀನಗರದಲ್ಲಿ 7 ಕಡೆ ದಾಳಿಗೆ ಇಳಿದಿತ್ತು. ಉಗ್ರರಿಗೆ ನೆರವಾಗುತ್ತಿದ್ದಾರೆ ಎಂದು ಪ್ರತ್ಯೇಕತಾವಾದಿಗಳಾದ ಯಾಸಿನ್​ ಮಲಿಕ್​, ಶಬೀರ್ ಶಾ, ಮಿರ್ವೈಜ್ ಉಮರ್ ಫಾರೂಕ್, ಮೊಹಮದ್​ ಅಶ್ರಫ್​ ಖಾನ್​​, ಮಸರತ್​ ಅಲಂ, ಜಫರ್​​ ಅಕ್ಬರ್​​ ಭಟ್​​, ನಸೀಂ ಗೀಲಾನಿ ಅವರ ನಿವಾಸಗಳ ಮೇಲೆ NIA ಅಧಿಕಾರಿಗಳ ತಂಡ ಭಾರೀ ಶೋಧ ಕಾರ್ಯ ನಡೆಸಿತು. 
ಶೋಧದ ವೇಳೆ, NIA ಗುಮಾನಿಗೆ ಇಂಬು ಕೊಡುವಂತೆ ಭಾರೀ ಆಸ್ತಿ ಪತ್ರಗಳು, ಹಣಕಾಸು ರವಾನೆ ರಸೀದಿಗಳು, ಬ್ಯಾಂಕ್​ ಖಾತೆಗಳ ವಿವರ, ವಿವಿಧ ಭಯೋತ್ಪಾದನಾ ಸಂಘಟನೆಗಳ ಲೆಟರ್​​ ಹೆಡ್ ಗಳು, ಪಾಕಿಸ್ತಾನದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಬಯಸಿ ಕೋರಿಕೆ ಪತ್ರಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳು ಈ ಪ್ರತ್ಯೇಕತಾವಾದಿಗಳಾದ ನಿವಾಸಗಳಲ್ಲಿ ಪತ್ತೆಯಾಗಿವೆ. ಮಿರ್ವೈಜ್ ಉಮರ್ ಫಾರೂಕ್ ಮನೆಯಲ್ಲಿ ಹೈಟೆಕ್ ಇಂಟರ್ನೆಟ್ ಕಮ್ಯುನಿಕೇಶನ್​​ ವ್ಯವಸ್ಥೆಯನ್ನು ವಶಪಡಿಸಿಕೊಳ್ಳಲಾಗಿದೆ.​​
ಈ ಹಿಂದೆಯೇ ಅಂದರೆ ಪುಲ್ವಾಮ ದಾಳಿ ನಡೆಯುತ್ತಿದ್ದಂತೆ ಜಮ್ಮು ಕಾಶ್ಮೀರದ ಒಂದಷ್ಟು ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿತ್ತು. ಈ ಪ್ರತ್ಯೇಕತಾವಾದಿಗಳು ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದು, ಒಳಗೊಳಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಂಟು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಸಾರಿತ್ತು. ಅಲ್ಲದೆ ಮಿರ್ವೈಜ್ ಉಮರ್ ಫಾರೂಕ್, ಶಬೀರ್ ಶಾ, ಹಶಿಮ್ ಖುರೇಷಿ, ಬಿಲಾಲ್ ಲೋನ್ ಮತ್ತು ಅಬ್ದುಲ್ ಘನಿ ಭಟ್ ಸೇರಿದಂತೆ ಇನ್ನಿತರ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆ, ಮುಂತಾದ ನೆರವನ್ನ ವಾಪಸ್​ ಪಡೆದಿತ್ತು.
ಇದೀಗ ಇವರ ಮೇಲೂ ಎನ್ಐಎ ಮೂಲಕ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡಿದ್ದು, ಉಂಡ ಮನೆಗೆ ದ್ರೋಹಬಗೆಯುತ್ತಿದ್ದ ಪ್ರತ್ಯೇಕತಾವಾದಿಗಳು ಸರಿಯಾಗಿ ಸಿಕ್ಕಿಬಿದಿದ್ದಾರೆ.
SCROLL FOR NEXT